ರೇಷನ್ ಕಾರ್ಡ್ ವಿತರಣೆಗೆ ಸಮಯ ಮಿತಿಯೊಳಗೆ ಕ್ರಮಕೈಗೊಳ್ಳಿ➤ಯು ಟಿ ಖಾದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.11ಒಂದು ತಿಂಗಳೊಳಗಾಗಿ ಜಿಲ್ಲೆಯಲ್ಲಿ ರೇಷನ್ ಕಾರ್ಡ್ ಕೋರಿ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥಪಡಿಸುವುದರ ಜೊತೆಗೆ ಹೊಸದಾಗಿ ಅರ್ಜಿ ಹಾಕುವವರಿಗೆ 15 ದಿವಸಗಳೊಳಗಾಗಿ ರೇಷನ್ ಕಾರ್ಡ್ ಕೊಡಲು ಅಗತ್ಯ ಕ್ರಮಕೈಗೊಳ್ಳಿ ಎಂದು ನಗರಾಭಿವೃದ್ಧಿ ಸಚಿವರೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು ಟಿ ಖಾದರ್ ಹೇಳಿದರು.

ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ, ಜಿಲ್ಲೆಯಲ್ಲಿ 5,186 ಅರ್ಜಿಗಳು ಬಾಕಿ ಇದ್ದು, ಇವರಿಗೆ ರೇಷನ್ ಕಾರ್ಡ್ ವಿತರಿಸಲು ಕ್ರಮಕೈಗೊಳ್ಳಿ ಎಂದು ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು. ಹೆಬ್ಬೆಟ್ಟು ಕೊಟ್ಟರೆ ಮಾತ್ರ ಪಡಿತರ ಎಂಬ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ಕೋರಿದ ಅವರು, ಕುಟುಂಬದಲ್ಲಿ ಒಬ್ಬರು ಹೆಬ್ಬೆಟ್ಟು ಕೊಟ್ಟರೂ ರೇಷನ್ ಲಭ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಎಲ್ಲರೂ ಹೆಬ್ಬೆಟ್ಟು ನೀಡಲು ಕಾಲಾವಕಾಶ ನೀಡಲಾಗುವುದು ಈ ಬಗ್ಗೆ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು.

ಹೊಸ ರೇಷನ್ ಕಾರ್ಡ್‍ಗೆ ಅರ್ಜಿ ಸಲ್ಲಿಸುವವರು ತಮ್ಮ ಆಧಾರ್ ಮತ್ತು ಆದಾಯ ಸರ್ಟಿಫಿಕೆಟ್‍ನ್ನು ಅರ್ಜಿಯ ಜೊತೆಗೆ ನೀಡಿದರೆ ಸಾಕು 15 ದಿನಗಳೊಳಗಾಗಿ ಕಾರ್ಡ್ ವಿತರಿಸಲು ಇಲಾಖಾ ಅಧಿಕಾರಿಗಳು ಕ್ರಮಕೈಗೊಳ್ಳುವರು ಎಂದರು. ಜಿಲ್ಲೆಗೆ ಕುಚಿಲಕ್ಕಿ ವಿತರಿಸಲು ಆದ್ಯತೆ ನೀಡಲಾಗುವುದು. ಅಕ್ಕಿ ಮತ್ತು ಬೇಳೆಯ ಗುಣಮಟ್ಟವನ್ನು ಇಲಾಖಾ ಅಧಿಕಾರಿಗಳು ಖಾತರಿಪಡಿಸಿಕೊಳ್ಳಬೇಕು; ಗುಣಮಟ್ಟದಲ್ಲಿ ರಾಜಿ ಬೇಡ ಎಂಬ ಸಲಹೆಯನ್ನು ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ನೀಡಿದರು.

ಹೊಸದಾಗಿ 25 ರೇಷನ್ ಅಂಗಡಿ ಆರಂಭಿಸಲು ಅರ್ಜಿ ಕರೆಯಲಾಗಿದೆ ಈ ಸಂಬಂಧ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದರು. ಅಡುಗೆ ಅನಿಲ ವಿತರಣೆ ಗುರಿಯಲ್ಲಿ 96 ಶೇಕಡ ಗುರಿ ಸಾಧನೆಯಾಗಿದ್ದು, ಮುಂದಿನ ಎರಡು ದಿನಗಳೊಳಗಾಗಿ ನೂರು ಶೇಕಡ ಗುರಿ ಸಾಧನೆಯಾಗಲಿದೆ ಎಂದರು. ಅಡುಗೆ ಅನಿಲ ವಿತರಣೆ ವೇಳೆ ಎರಡು ರೀಫಿಲ್ಲಿಂಗ್ ಉಚಿತವಿರುವ ಮಾಹಿತಿಯನ್ನು ಅರ್ಹ ಫಲಾನುಭವಿಗಳಿಗೆ ನೀಡುವಂತೆ ಸಚಿವರು ಆದೇಶಿಸಿದರು.

error: Content is protected !!

Join the Group

Join WhatsApp Group