(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.4.ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಕಾರ್ಯಕ್ರಮವನ್ನು 2019-20ನೇ ಸಾಲಿನ ಮುಂಗಾರು ಹಂಗಾಮಿಗೆ ಮುಂದುವರಿಸಿ ಸರ್ಕಾರ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದರಿ ಯೋಜನೆಯಡಿ ಮುಂಗಾರು ಹಂಗಾಮಿಗೆ ಮಂಗಳೂರು ತಾಲೂಕಿನ ಮಂಗಳೂರು-ಎ ಹೋಬಳಿಯನ್ನು ಹೊರತು ಪಡಿಸಿ ಉಳಿದ ಎಲ್ಲಾ ಹೋಬಳಿಯ 200 ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನಗೊಳಿಸಲು ಅವಕಾಶವಿರುತ್ತದೆ.
2019ರ ಮುಂಗಾರು ಹಂಗಾಮಿನಲ್ಲಿ ಬೆಳೆಸಾಲ ಪಡೆಯುವ ಮತ್ತು ಪಡೆಯದ ರೈತರು ಬ್ಯಾಂಕುಗಳಿಗೆ ಘೋಷಣೆಗಳನ್ನು ಸಲ್ಲಿಸಲು ದಿನಾಂಕವನ್ನು ದಿ:14-8-2019ಕ್ಕೆ ನಿಗದಿಪಡಿಸಲಾಗಿದೆ. ಈ ಯೋಜನೆಯು ಬೆಳೆಸಾಲ ಪಡೆದ ರೈತರಿಗೆ ಕಡ್ಡಾಯವಾಗಿದ್ದು, ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣಿ/ಖಾತೆ/ಪಾಸ್‍ಪುಸ್ತಕ/ಕಂದಾಯ ರಶೀದಿ ಯಾವುದಾದರೂ ಒಂದನ್ನು ನೀಡಿ ನೊಂದಣಿ ಮಾಡಿಸಬಹುದು ಹಾಗೂ ಬೆಳೆ ಬಿತ್ತಿದ/ನಾಟಿ ಮಾಡಿದ 30 ದಿನಗಳೊಳಗೆ ಅಥವಾ ನಿಗದಿಪಡಿಸಿರುವ ದಿನಾಂಕದೊಳಗೆ ಯಾವುದು ಮುಂಚೆಯೋ ಆ ಅವಧಿಯೊಳಗೆ ಬ್ಯಾಂಕಿಗೆ ತಮ್ಮ ಘೋಷಣೆಗಳನ್ನು ಸಲ್ಲಿಸಬಹುದಾಗಿದೆ.
ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆಯಡಿ ರಾಜ್ಯ ಸರ್ಕಾರವು ನಡೆಸುವ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಕಂಡು ಹಿಡಿಯಲಾದ ಇಳುವರಿ ಮಾಹಿತಿಯನ್ನು ಮಾತ್ರ ಪರಿಗಣಿಸಿ ಬೆಳೆ ವಿಮಾ ನಷ್ಟ ದ ಪರಿಹಾರವನ್ನು ಲೆಕ್ಕ ಹಾಕಿ ಇತ್ಯರ್ಥಪಡಿಸಲಾಗುವುದು. ಮುಂಗಾರು ಹಂಗಾಮಿನಲ್ಲಿ ಅಧಿಸೂಚಿಸಲಾದ ಭತ್ತದ ಬೆಳೆಗೆ ಆಲಿಕಲ್ಲು ಮಳೆ ಮತ್ತು ಭೂ ಕುಸಿತದಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ವಿಮಾ ಸಂಸ್ಥೆಯು ಇತ್ಯರ್ಥ ಪಡಿಸುತ್ತದೆ.
ಇಂತಹ ಸ್ಥಳೀಯ ಗಂಡಾಂತರಗಳ ಕಾರಣದಿಂದ ಬೆಳೆ ನಷ್ಟ ಸಂಭವಿಸಿದರೆ, ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆಯ ಕಛೇರಿಗೆ ತಕ್ಷಣ ಸೂಚನೆ ನೀಡಬೇಕು ಮತ್ತು ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಗಳೊಳಗಾಗಿ ತಿಳಿಸಬೇಕು. ಒಂದು ವಿಮಾ ಘಟಕ ಎಂದರೆ ಒಟ್ಟು ಸಮಗ್ರ ಬಿತ್ತನೆ ಪ್ರದೇಶದಲ್ಲಿ ಕನಿಷ್ಠ 25% ಪ್ರದೇಶವಾದರೂ ಬಿತ್ತನೆಯಾಗಿರಬೇಕು.2019ರ ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಹವಾಮಾನ ವೈಪರೀತ್ಯ, ಪ್ರವಾಹ, ಭೂ ಕುಸಿತ ಹಾಗೂ ನೈಸರ್ಗಿಕ ಬೆಂಕಿಯಿಂದ, ಬಿತ್ತನೆಯಾದ ನಂತರ ಕಟಾವಿಗೆ ಮೊದಲು ಸಾಮಾನ್ಯ ಇಳುವರಿಗಿಂತ ಶೇಕಡಾ 50ಕ್ಕಿಂತ ಹೆಚ್ಚಿನ ಬೆಳೆ ನಷ್ಟ ಸಂಭವಿಸಿದಲ್ಲಿ ವಿಮೆ ಮಾಡಿಸಿದ ರೈತರಿಗೆ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇಕಡಾ 25ರಷ್ಟು ಹಣವನ್ನು ಮುಂಚಿತವಾಗಿ ವಿಮಾ ಸಂಸ್ಧೆಯು ನೀಡತಕ್ಕದ್ದು.
ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಬೆಳೆ ಇಳುವರಿ ಮಾಹಿತಿ ಬಂದನಂತರ ಅಂತಿಮ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಈ ಹಣವನ್ನು ಹೊಂದಾಣಿಕೆ ಮಾಡತಕ್ಕದ್ದು.ಈ ಯೋಜನೆಯಡಿ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲೆ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಎರಡು ವಾರಗಳೊಳಗೆ (ಹದಿನಾಲ್ಕು ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಧೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಪಡಿಸಲಾಗಿದೆ.ಬೆಳೆ ನಷ್ಟವನ್ನು ಜಿಲ್ಲಾ ಮಟ್ಟದಲ್ಲಿ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು, ಸಂಬಂಧಿಸಿದ ವಿಮಾ ಸಂಸ್ಥೆಯ ಅಧಿಕಾರಿಗಳು,ಲೀಡ್ ಬ್ಯಾಂಕ್ ಅಧಿಕಾರಿಗಳ ನ್ನೊಳಗೊಂಡ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ಸಮಿತಿಯು ಅಂದಾಜಿಸಿ ತೀರ್ಮಾನಿಸಿದಂತೆ ವಿಮೆ ಮಾಡಿಸಿದ ರೈತರಿಂದ ಅರ್ಜಿ ಬಂದ ನಂತರ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸತಕ್ಕದ್ದಾಗಿದೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯು ರೈತ ಸಮುದಾಯಕ್ಕೆ ಉಪಯುಕ್ತವಾದ ಯೋಜನೆಯಾಗಿಸುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸದರಿ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.ಹೆಚ್ಚಿನ ವಿವರಗಳಿಗೆ ಸ್ಥಳೀಯ ವಾಣಿಜ್ಯ/ಗ್ರಾಮೀಣ ಸಹಕಾರಿ ಬ್ಯಾಂಕ್ (ಸಾಲ ಸಂಸ್ಥೆ)ಗಳನ್ನು ಹೋಬಳಿ ರೈತ ಸಂಪರ್ಕ ಕೇಂದ್ರ/ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು/ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.