(ನ್ಯೂಸ್ ಕಡಬ) newskadaba.com ಅ. 14. ಬೆಂಗಳೂರು : ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ಮುಂದುವರಿದಿದೆ. ಇಂದು ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ 12 ಕಡೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಆದಾಯಕ್ಕೂ ಮೀರಿ ಅಧಿಕ ಆಸ್ತಿ ಗಳಿಕೆ ಆರೋಪದಲ್ಲಿ ಹಾಸನ, ಕಲಬುರ್ಗಿ, ಚಿತ್ರದುರ್ಗ, ಉಡುಪಿ, ದಾವಣಗೆರೆ, ಹಾವೇರಿ, ಬಾಗಲಕೋಟೆ ಮತ್ತು ಬೆಂಗಳೂರು ನಗರದಲ್ಲಿ ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಮೂರು ಕಡೆ ಲೋಕಾಯುಕ್ತ ದಾಳಿ ನಡೆದಿದೆ. ಮೆಡಿಕಲ್ ಅಧಿಕಾರಿ- ಮಂಜುನಾಥ್, ಜಿ. ವಿ. ಪಿ.ಯು ಬೋರ್ಡ್ ನಿರ್ದೇಶಕಿ- ಸುಮಂಗಳ, ಸರ್ವೇಯರ್ ಅಧಿಕಾರಿ ಗಂಗಾ ಮರೀಗೌಡ ಮನೆ ಮೇಲೆ ದಾಳಿ ನಡೆಸಲಾಗಿದೆ. ಈ ಹಿಂದೆ ಪ್ರೌಢ ಶಿಕ್ಷಣಾ ಮಂಡಳಿ ನಿರ್ದೇಶಕಿ ಆಗಿದ್ದ ಸುಮಂಗಳ ಮನೆ ಮೇಲೆ, ನಾಲ್ಕು ವಾಹನಗಳಲ್ಲಿ ಬಂದ ಹತ್ತು ಲೋಕಾಯುಕ್ತ ಅಧಿಕಾರಿಗಳು ಸತತ ನಾಲ್ಕು ಗಂಟೆಗಳಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಸ್ಪಿ ಶಿವಪ್ರಕಾಶ್ ದೇವರಾಜ್ ಭೇಟಿ ನೀಡಿದ್ದಾರೆ.
ಎರಡು ಕೇಸ್‌ಗಳ ವಿರುದ್ಧ ದಾಳಿ ಮಾಡಿದ್ದೇವೆ. ಬೆಳಿಗ್ಗೆ 6 ಗಂಟೆಗೆ ದಾಳಿ ನಡೆಸಲಾಗಿದೆ. ಮಂಜುನಾಥ್ ಅಂತಾ ಓರ್ವ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ದಾಳಿ ನಾಲ್ಕು ತಂಡಗಳಲ್ಲಿ ಮಾಡಿದ್ದೇವೆ. ಆಫೀಸ್ ಹಾಗೂ ಮನೆ ಮೇಲೆ ದಾಳಿ ಮಾಡಲಾಗಿದೆ. ಈ ಹಿಂದೆ ಪ್ರೌಢ ಶಿಕ್ಷಣ ಮಂಡಳಿ ಇಲಾಖೆ ನಿರ್ದೇಶಕಿ ಆಗಿದ್ದ ಸುಮಂಗಲ ಮನೆ ಸೇರಿದಂತೆ ಮಂಜುನಾಥ್‌ಗೆ ಸೇರಿದ್ದ ಕಡೆ 16 ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸುಮಂಗಳಗೆ ಸೇರಿದ ಮನೆ ಹಾಗೂ ಕಚೇರಿ ಮೇಲೆ 25 ಜನ ಸಿಬ್ಬಂದಿ ದಾಳಿಮಾಡಿದ್ದು, ಪಂಚರ ಸಮ್ಮುಖದಲ್ಲಿ ದಾಖಲೆ ಸೀಜ್ ಮಾಡಲಾಗುತ್ತೆ ಎಂದು ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ಹೇಳಿದ್ದಾರೆ.













