(ನ್ಯೂಸ್ ಕಡಬ) newskadaba.com, ಸೆ.09: ನೇಪಾಳ ಸರ್ಕಾರದ ಸಾಮಾಜಿಕ ಜಾಲತಾಣ ನಿಷೇಧದ ನಿರ್ಧಾರದಿಂದ ಉಂಟಾದ ಭಾರೀ ಜನಾಕ್ರೋಶ, ಈಗ ನೇಪಾಳದ ರಾಜಕೀಯ ಸ್ಥಿತಿಗತಿಯನ್ನೇ ತಲೆಕೆಳಗಾಗಿಸಿರುವ ಮಧ್ಯೆ, ಹಿಮಾಲಯದ ಮಾನಸಸರೋವರ ಯಾತ್ರೆಗೆ ತೆರಳಿದ 200ಕ್ಕೂ ಹೆಚ್ಚು ಕನ್ನಡಿಗರು ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ದೇಶದಾದ್ಯಂತ ವ್ಯಾಪಕ ಹಿಂಸಾಚಾರ, ಬೆಂಕಿ ಹಚ್ಚುವ ಕೃತ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣದ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಬೆಂಗಳೂರು ಮೂಲದ ರಜನಿ ಮಸ್ಕಿ ಮತ್ತು ರಘುವೀರ್ ಯಾವಗಲ್ ದಂಪತಿ, ಇಶಾ ಫೌಂಡೇಶನ್ನೊಂದಿಗೆ ಸುಮಾರು 130 ಜನರ ಗುಂಪಿನಲ್ಲಿ ಮಾನಸಸರೋವರ ಯಾತ್ರೆಗೆ ತೆರಳಿದ್ದರು. ಈ ಯಾತ್ರೆಯ ಬಳಿಕ ಅವರು ಸೆಪ್ಟೆಂಬರ್ 9ರ ರಾತ್ರಿ 10:30ರ ಸುಮಾರಿಗೆ ಕಠ್ಮಂಡು ವಿಮಾನ ನಿಲ್ದಾಣಕ್ಕೆ ಮರಳಿದರು. ಆದರೆ ಅಲ್ಲಿನ ಸುದೀಪ್ತ ರಾಜಕೀಯ ಗೊಂದಲದಿಂದಾಗಿ ವಿಮಾನ ನಿಲ್ದಾಣ ಬಂದ್ ಆಗಿದ್ದು, ಹಲವಾರು ಪ್ರಯಾಣಿಕರು ಹೊರಬರಲಾಗದೆ ಹೈರಾಣಾದ ಪರಿಸ್ಥಿತಿ ಎದುರಾಗಿದೆ. ಸ್ಥಳದಲ್ಲಿ ಆಹಾರ, ನೀರು ಮತ್ತು ತುರ್ತು ಸೌಲಭ್ಯಗಳ ಕೊರತೆಯಿದೆ ಎಂಬುದಾಗಿ ರಜನಿ ಮಸ್ಕಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ನಮಗೆ ಏನು ಮಾಡಬೇಕು ಎಂಬುದು ಅರ್ಥವಾಗುತ್ತಿಲ್ಲ. ಆಹಾರ, ನೀರಿಲ್ಲ. ಅಂಗಡಿಗಳು ಮುಚ್ಚಿರುತ್ತವೆ. ಹೊರಗೆ ಹೋಗಲು ಅನುಮತಿ ಇಲ್ಲ. ನಾವು ಸಂಪೂರ್ಣ ಅಸಹಾಯಕರಾಗಿದ್ದೇವೆ,” ಎಂದು ಅವರು ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅವರ ಮಾತುಗಳ ಪ್ರಕಾರ, ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನರು ತಂಗಿದ್ದು, ಕನಿಷ್ಠ 200ಕ್ಕೂ ಹೆಚ್ಚು ಮಂದಿ ಕರ್ನಾಟಕದವರು.














