(ನ್ಯೂಸ್ ಕಡಬ) newskadaba.com ಮಂಗಳೂರು, ಎ.18. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಜಗದೀಶ್ ಅಮ್ಮುಂಜೆ ಸ್ಮಾರಕ ಆರ್ಟ್ ಗ್ಯಾಲರಿಯ ಸಂಯುಕ್ತ ಆಶ್ರಯದಲ್ಲಿ ಎ.21 ರಂದು ಮಂಗಳೂರಿನ ಉರ್ವಾಸ್ಟೋರ್ ತುಳುಭವನದ ಸಿರಿ ಚಾವಡಿಯಲ್ಲಿ ‘ ತುಳು ಬದ್‍ಕ್ ‘ ಎಂಬ ವಿಷಯದಲ್ಲಿ ಚಿತ್ರಕಲಾ ಶಿಬಿರ ನಡೆಯಲಿದೆ. ಹಿರಿಯ ಕಲಾವಿದರಾಗಿದ್ದ ಜಗದೀಶ್ ಅಮ್ಮುಂಜೆ ಅವರ ನೆನಪಿನಲ್ಲಿ ಆಯೋಜಿಸಲಾಗಿರುವ ಒಂದು ದಿನದ ಚಿತ್ರಕಲಾ ಶಿಬಿರದಲ್ಲಿ ಮಂಗಳೂರಿನ ಮಹಾಲಸ ಚಿತ್ರಕಲಾ ಮಹಾವಿದ್ಯಾಲಯದ 25 ಮಂದಿ ಯುವ ಕಲಾವಿದರು ತುಳುನಾಡಿನ ಬದುಕು, ಸಂಸ್ಕೃತಿ ಬಗ್ಗೆ ಕಲಾಕೃತಿಗಳನ್ನು ರಚಿಸಲಿದ್ದಾರೆ. ಮಹಾಲಸ ಚಿತ್ರಕಲಾ ಮಹಾವಿದ್ಯಾಲಯದ ಚಿತ್ರಕಲಾ ವಿಭಾಗದ ಮುಖ್ಯಸ್ಥ ಎನ್.ಎಸ್. ಪತ್ತಾರ್ ಅವರು ಶಿಬಿರದ ನಿರ್ದೇಶಕರಾಗಿದ್ದಾರೆ.
ಎಪ್ರಿಲ್ 21 ರಂದು ಬೆಳಿಗ್ಗೆ 10 ಗಂಟೆಗೆ ಚಿತ್ರಕಲಾ ಶಿಬಿರವನ್ನು ಕಲಾವಿದರು ಹಾಗೂ ಕಲಾ ಶಿಕ್ಷಕರಾಗಿರುವ ಎಂ.ಜಿ.ಕಜೆ ಮತ್ತು ನಳಿನಿ ಕಜೆ ಉದ್ಘಾಟಿಸಲಿದ್ದಾರೆ. ಶಿಬಿರದ ಸಮಾರೋಪ ಸಮಾರಂಭವು ಅಂದು ಸಂಜೆ 4.30 ಕ್ಕೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಕೇರಳ ತುಳು ಅಕಾಡೆಮಿಯ ಅಧ್ಯಕ್ಷ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಪಿ.ಎಸ್. ಪುಣಿಂಚತ್ತಾಯ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಅವರು ವಹಿಸುವರು. ಅತಿಥಿಗಳಾಗಿ ಶ್ರೀ ದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಸದಾನಂದ ಶೆಟ್ಟಿ , ಖ್ಯಾತ್ಯ ವೈದ್ಯರು ಹಾಗೂ ಲೇಖಕರು ಆಗಿರುವ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಹಾಗೂ ಕೃಷಿಕರಾಗಿರುವ ಜೀವನ್‍ದಾಸ್ ಅಮ್ಮುಂಜೆ ಭಾಗವಹಿಸುವರು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಅವರ ಪ್ರಕಟಣೆ ತಿಳಿಸಿದೆ.