(ನ್ಯೂಸ್ ಕಡಬ) newskadaba.com ಕಡಬ, ಎ.16. ಅದು ಅರುವತ್ತರ ದಶಕ, ಅಂದಿನ ಕಾಲಕ್ಕೆ ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮ ಎನ್ನುವುದು ಅಪರೂಪ. ಆದರೆ ದೇಶದ ಹಳ್ಳಿಹಳ್ಳಿಗೆ ರೇಡಿಯೋ ಮಾಧ್ಯಮ ಮಾತ್ರ ಕಾಲಿಟ್ಟಿತ್ತು. ಆದರೆ ಅದು ಉಳ್ಳವರ ಸೊತ್ತು ಎನ್ನುವ ಮಾತು ಪ್ರಚಲಿತದಲ್ಲಿತ್ತು. ಅಂತದೊಂದು ವಾತಾವರಣದಲ್ಲಿ ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ರೇಡಿಯೋ ಪೆವಿಲಿಯನ್ ಇರುತ್ತಿತ್ತು. ಆದರೆ ಅದೆಲ್ಲಾ ನೇಪೇಥ್ಯಕ್ಕೆ ಸರಿದು ಹಲವು ವರ್ಷಗಳೇ ಸಂದು ಹೋಗಿವೆ.
ಅದರ ಕುರುಹು ಎನ್ನುವಂತೆ ಹೊಸಮಠದಲ್ಲೊಂದು ರೇಡಿಯೋ ಪೆವಿಲಿಯನ್ ಕಟ್ಟಡ ಈಗಲೂ ಉಳಿದುಕೊಂಡಿದೆ, ಪಿರಮಿಡ್ ಆಕಾರದ ಆರು ಕೋನಗಳ ಈ ಕಟ್ಟಡ ಈಗ ರೇಡಿಯೋ ಪೆವಿಲಿಯನ್ ಆಗಿ ಉಳಿದುಕೊಳ್ಳದೆ, ಅಂಚೆ ಕಛೇರಿ ಕಟ್ಟಡವಾಗಿ ಪರಿವರ್ತನೆಯಾಗಿದೆ. ಮೂಲ ಕಟ್ಟಡಕ್ಕೆ ಮೇಲ್ಚಾವಣಿಯಾಗಿ ಈಗ ಶೀಟು ಹೊದಿಸಲಾಗಿದೆ. ಕಿಟಕಿಗಳು ಮೂಲ ವ್ಯವಸ್ಥೆಯನ್ನು ಉಳಿಸಿಕೊಳ್ಳಲಾಗಿದೆ. ಅದರಲ್ಲಿ ರೇಡಿಯೋ ಲೌಡ್ ಸ್ಪೀಪಕರ್ ಅಳವಡಿಸಲಾಗಿದ್ದ ನಾಲ್ಕೂ ಭಾಗದ ವೃತ್ತಾಕಾರದ ತೂತುಗಳಿಗೆ ತಂತಿಯ ನೆಟ್ ಅಳಡಿಲಸಲಾಗಿದೆ. ಇದೀಗ ಅಂಚೆ ಕಛೇರಿಯಾಗಿ ಪರಿವರ್ತನೆಯಾಗಿದ್ದರೂ ಹವಾನಿಯಂತ್ರಿತ ಕೊಠಡಿಯಂತೆ ತಂಪನ್ನೀಯುತ್ತದೆ.
ಒಂದು ಕಾಲಕ್ಕೆ ಊರಿನ ಜನಕ್ಕೆ ಈ ರೇಡಿಯೋ ಪೆವಿಲಿಯನ್ ಸುದ್ದಿಹೊತ್ತು ತರುವ ಮಾಧ್ಯವಾಗಿ ಜನಾರ್ಕಷಣೆ ಪಡೆದುಕೊಂಡಿತ್ತು. ಸಂಜೆಯಾಗುತ್ತಲೇ ಊರಿನ ಜನ ರೇಡಿಯೋ ಕೇಳಲು ಜಮಾಯಿಸುತ್ತಿದ್ದರು. ಆಗ ದೇಶದಲ್ಲಿ ಪ್ರಭಲವಾಗಿ ಇದ್ದ ರಾಜಕೀಯ ಪಕ್ಷಗಳೆಂದರೆ ಕಾಂಗ್ರೇಸ್ ಹಾಗೂ ಸ್ವತಂತ್ರ ಪಕ್ಷ, ಈ ಪಕ್ಷಗಳ ಜಿದ್ದಾಜಿದ್ದಿಗಳು ರೇಡಿಯೋ ಮುಖಾಂತರ ಜನರಿಗೆ ಸಿಗುತ್ತಿತ್ತು. ದೇಶದ ಆಗು ಹೋಗುಗಳು ಅಂದಿನ ಪ್ರಚಲಿತ ವಿದ್ಯಮಾನಗಳು ರೇಡಿಯೋ ಅಭಿಮಾನಿಗಳ ಕಿವಿಗೆ ಬೀಳುತ್ತಿದ್ದವು. ಇನ್ನು ಹುಡುಗಾಡಿಕೆಯ ಮಕ್ಕಳಂತು ಪಕ್ಕದಲ್ಲೇ ಇದ್ದ ಜಾರು ಬಂಡಿಯಲ್ಲಿ ಆಟವಾಡಿ ರೇಡಿಯೋದಲ್ಲಿ ಬರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೇಳುತ್ತಿದ್ದರು. ಅಂದಿನ ಕಾಲದ ಹೊಸ ಚಲನಚಿತ್ರ ಗೀತೆಗಳು ಕೂಡಾ ರಂಗುರಂಗಾಗಿ ಪ್ರಸಾರವಾಗುತ್ತಿದ್ದವು.
ಅರವತ್ತರ ದಶಕದಲ್ಲಿ ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ವ್ಯವಸ್ಥೆಯಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಅಂದು ಊರಿಗೆ ದೊಡ್ಡ ಹೆಸರು ಎನ್ನುವಂತಿದ್ದ ಗಣಪತಿ ನರಸಿಂಹ ಹೆಬ್ಬಾರ್ ಅವರು ಪಂಚಾಯಿತಿ ಅಧ್ಯಕ್ಷರಾಗಿದ್ದರು. ಅವರು ಮುತುವರ್ಜಿವಹಿಸಿ ಹೊಸಮಠದಲ್ಲಿದ್ದ ತನ್ನ ಸ್ವಂತ ಜಾಗದಲ್ಲೇ ಈ ರೇಡಿಯೋ ಪೆವಿಲಿಯನ್ ನಿರ್ಮಾಣ ಮಾಡಿದ್ದರು. ಅಂದು ಗ್ರಾಮಕರಣಿಕರೇ ಪಂಚಾಯಿತಿ ಕಾರ್ಯದರ್ಶಿಯಾಗಿದ್ದ ಸಂದರ್ಭ ಈ ಕಟ್ಟಡವನ್ನು ಆಜುಬಾಜು ನಾಲ್ಕರಿಂದ ಐದು ಸಾವಿರ ರೂ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಐದು ವರ್ಷಗಳ ಕಾಲ ರೇಡಿಯೋ ಪೆವಿಲಿಯನ್ ಚೆನ್ನಾಗಿಯೇ ಕೆಲಸ ಮಾಡುತ್ತಿತ್ತು. ಕಾರಣಾಂತರಗಳಿಂದ ರೆಡಿಯೋ ಪೆವಿಲಿಯನ್ ಪೆವಿವಿಲಿಯನ್ಗೆ ಸರಿಯಿತು. ಬಳಿಕ ದಿನಗಳಲ್ಲಿ ಗ್ರಾಮ ಪಂಚಾಯಿತಿ ವ್ಯವಸ್ಥೆ ಹೋಗಿ ಎರಡು ಅಥವಾ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಜೋಡಿಸಿ ಮಂಡಲ ಪಂಚಾಯಿತಿಯನ್ನು ಅಸ್ಥಿತ್ವಕ್ಕೆ ಬಂತು. ಅದೂ ಹೋಗಿ ಮತ್ತೆ ಗ್ರಾಮ ಪಂಚಾಯಿತಿ ಅನುಷ್ಟಾನವಾಯಿತು. ಈ ಮಧ್ಯೆ ಹಲವು ವರ್ಷಗಳ ಕಾಲ ಕಟ್ಟಡ ಅನಾಥವಾಗಿ ಖಾಲಿಯಾಗಿತ್ತು. ಬಳಿಕ ನಡೆದ ಬೆಳವಣಿಗೆಯಲ್ಲಿ ಈ ರೇಡಿಯೋ ಪೆವಿಲಿಯನ್ ಕಟ್ಟಡದಲ್ಲಿ ವೆಂಕಟ ಸುಬ್ರಾಯ ಎನ್ನುವವರು ನೇತೃತ್ವವಹಿಸಿದ್ದ ಯೂತಕ್ಲಬ್ ಕಛೇರಿ ಪ್ರಾರಂಭವಾಗಿತ್ತು. ಅದು ಸರಿಸುಮಾರು ಹತ್ತು ವರ್ಷ ಈ ಕಟ್ಟಡದಲ್ಲಿ ಅಧಿಪತ್ಯ ಸಾಧಿಸಿತ್ತು. ಇದೀಗ ಅಂಚೆ ಕಛೇರಿಗೆ ಹಸ್ತಾಂತರವಾಗಿ ಸುಮಾರು ಇಪ್ಪತ್ತು ವರ್ಷಗಳು ಸಂದಿವೆ. ಆದರೂ ಮೂಲ ಕಟ್ಟಡ ಹಾಗೆಯೇ ಇದೆ. ಇಂತಹ ಕಟ್ಟಡಗಳು ಕಡಬ ಸೇರಿದಂತೆ ತಾಲೂಕಿನ ಬಹುತೇಕ ಕಡೆ ಕಾಣಸಿಗುತ್ತಿದ್ದವು. ಆದರೆ ಇತ್ತೀಚೆಗೆ ಅದೆಲ್ಲವೂ ಅಭಿವೃದ್ಧಿ ಹೆಸರಲ್ಲಿ ಮಾಯವಾಗಿವೆ. ಬಲು ಅಪರೂಪ ಎನ್ನಬಹುದಾಗ ಇಂತಹ ಕಟ್ಟಗಳನ್ನು ಅವುಗಳ ಮೂಲ ಸ್ವರೂಪದಲ್ಲಿ ಉಳಿಸಿಕೊಂಡರೆ ಮುಂದಿನ ಪೀಳಿಗೆಗೆ ಸ್ವಾರಕವಾಗಿ ಉಳಿದುಕೊಳ್ಳಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಒಂದು ಕಾಲದಲ್ಲಿ ವಿನೂತನ ಶೈಲಿಯಲ್ಲಿ ನಿರ್ಮಾಣವಾಗುತ್ತಿದ್ದ ಕಟ್ಟಡಗಳಲ್ಲಿ ಹೊಸಮಠ ರೇಡಿಯೋ ಪೆವಿಲಿಯನ್ ಕಟ್ಟಡ ಕೂಡಾ ಒಂದು. ಇದನ್ನು ನನ್ನ ತಂದೆಯವರು(ಗಣಪತಿ ನರಸಿಂಹ ಹೆಬ್ಬಾರ್) ಪಂಚಾಯಿತಿ ಅಧ್ಯಕ್ಷರಾಗಿದ್ದಾಗ ಸ್ವತಃ ಭೂದಾನ ಮಾಡಿ ನಿರ್ಮಿಸಿದ್ದರು. ತನ್ನ ಮನೆಯಲ್ಲಿಯೇ ಪಂಚಾಯಿತಿ ಕಛೇರಿ ಇದ್ದ ಸಂದರ್ಭದಲ್ಲಿ ಬಳಿಕ ಹೊಸಮಠದ ತಮ್ಮದೇ ಕಟ್ಟಡಕ್ಕೆ ವರ್ಗಾಯಿದ್ದರು, ಈಗಿರುವ ಪಂಚಾಯಿತಿ ಕಟ್ಟಡ ಜಾಗ, ಹೊಸಮಠ ಪ್ರಾಥಮಿಕ ಕೃಷಿಪತ್ತಿನ ಕಟ್ಟಡ ಜಾಗ, ಸ್ಥಳೀಯ ಪ್ರಾಥಮಿಕ ಶಾಲಾ ಜಾಗವೆಲ್ಲವೂ ಅವರು ದಾನವಾಗಿ ನೀಡಿದ ಜಾಗವಾಗಿದೆ. ಈಗ ಎಲ್ಲವೂ ಬದಲಾಗಿದೆ. ರೇಡಿಯೋ ಪೆವಿಲಿಯನ್ ಕಟ್ಟಡ ಮಾತ್ರ ಉಳಿದುಕೊಂಡಿದೆ. ತಂದೆಯವರ ನೆನಪಿಗೋಸ್ಕರವಾದರೂ ಆ ಕಟ್ಟಡವನ್ನು ಹಾಗೇ ಉಳಿಸಿಕೊಳ್ಳುವ ಪ್ರಯತ್ನ ಸ್ಥಳಿಯಾಡಳಿತದಿಂದ ನಡೆಯಬೇಕು ಎಂದು ನಿವೃತ್ತ ಸೈನಿಕ, ರಘುನಾಥ್ ಹೆಬ್ಬಾರ್ ತಿಳಿಸಿದ್ದಾರೆ.