(ನ್ಯೂಸ್ ಕಡಬ) newskadaba.com, ಆ.18: ದಿಯಾ ಸಿನಿಮಾದ ನಿರ್ಮಾಪಕ ಕೃಷ್ಣ ಚೈತನ್ಯ ಸೇರಿದಂತೆ ಮೂವರ ವಿರುದ್ದ ಎಫ್ಐಆರ್ ದಾಖಲಾಗಿದೆ. ವರ್ತೂರು ಬಳಿಯ ಜಮೀನು ಒಡೆತನದ ವಿಚಾರವಾಗಿ ಬೆಳ್ಳಂದೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಿನಾಪ್ಸೆ ಕನ್ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ನ ಕೃಷ್ಣ ಚೈತನ್ಯ, ಸಚಿನ್ ನಾರಾಯಣ್ ಮತ್ತು ಸಹಚರರು ಕಸವನಹಳ್ಳಿ ಗ್ರಾಮದ ಸರ್ವೆ ನಂ.52ರಲ್ಲಿನ 3 ಎಕರೆ 35 ಗುಂಟೆ ಜಮೀನಿಗೆ ನಕಲಿ ದಾಖಲೆಪತ್ರಗಳನ್ನು ಸೃಷ್ಟಿಸಿಕೊಂಡು ಅತಿಕ್ರಮ ಪ್ರವೇಶಿಸಿದ್ದಾರೆ. ಆ ಜಮೀನು ನನಗೆ ಸೇರಿದ್ದು, ಕೃಷ್ಣ ಚೈತನ್ಯ ಹಾಗೂ ಸಹಚರು ಅವಾಚ್ಯ ಶಬ್ದಗಳಿಂದ ನಿಂದಿಸಿಜೀವ ಬೆದರಿಕೆ ಹಾಕಿದ್ದಾರೆ ಎಂದು ರಾಮಮೂರ್ತಿ ಅವರು ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಕೃಷ್ಣ ಚೈತನ್ಯ ಅವರು ರಾಮಮೂರ್ತಿ, ಸತೀಶ್ , ಸುನಿಲ್, ಶಿವರಾಮರೆಡ್ಡಿ, ರಾಘವೇಂದ್ರ ಹಾಗೂ ಸಹಚರರ ವಿರುದ್ದ ದೂರು ದಾಖಲಿಸಿದ್ದಾರೆ. ದೂರು ಹಾಗೂ ಪ್ರತಿದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.













