(ನ್ಯೂಸ್ ಕಡಬ) newskadaba.com, ಆ.07: ತೀರ್ಥಹಳ್ಳಿ–ಕುಂದಾಪುರ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟ್ ಸರಪಳಿ ಹೆರ್ಪಿನ್ ತಿರುವಿನಲ್ಲಿ ಭೂಕುಸಿತ ಉಂಟಾಗಿದೆ. ಹಾಗಾಗಿ ಸುರಕ್ಷತಾ ದೃಷ್ಟಿಯಿಂದ ತಾತ್ಕಾಲಿಕವಾಗಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.
ತೀರ್ಥಹಳ್ಳಿಯಿಂದ ರಾವೆ–ಕಾನಗೋಡು–ಮಾಸ್ತಿಕಟ್ಟೆ–ಹುಲಿಕಲ್ ಘಾಟ್–ಹೊಸಂಗಡಿ–ಸಿದ್ದಾಪುರ ಮೂಲಕ ಕುಂದಾಪುರದ ಕಡೆಗೆ ಹೋಗುವ ಭಾರೀ ವಾಹನಗಳು ಪರ್ಯಾಯ ಮಾರ್ಗವಾಗಿ ತೀರ್ಥಹಳ್ಳಿ–ರಾವೆ–ಕಾನುಗೋಡು–ನಗರ–ಕೊಲ್ಲೂರು–ಕುಂದಾಪುರ ರಸ್ತೆ ಮೂಲಕ ಸಂಚರಿಸಬೇಕು ಎಂದು ತಿಳಿಸಲಾಗಿದೆ.
ನಗರ – ಸಿದ್ದಾಪುರ ರಾಜ್ಯ ಹೆದ್ದಾರಿ -278 ರಸ್ತೆ ತೀರ್ಥಹಳ್ಳಿಯಿಂದ ಯಡೂರು–ಸುಳಗೋಡು–ಮಾಸ್ತಿಕಟ್ಟೆ–ಹುಲಿಕಲ್ ಘಾಟ್–ಹೊಸಂಗಡಿ–ಸಿದ್ದಾಪುರ ಮೂಲಕ ಕುಂದಾಪುರದ ಕಡೆಗೆ ಹೋಗುವ ಭಾರೀ ವಾಹನಗಳು ತೀರ್ಥಹಳ್ಳಿ–ಯಡೂರು–ಮಾಸ್ತಿಕಟ್ಟೆ–ಕಾನುಗೋಡು–ನಗರ–ಕೊಲ್ಲೂರು–ಕುಂದಾಪುರ ರಸ್ತೆ ಮೂಲಕ ಸಂಚರಿಸುವಂತೆ ಸೂಚನೆ ನೀಡಲಾಗಿದೆ.
ಶಿವಮೊಗ್ಗ, ಸಾಗರ ಕಡೆಯಿಂದ ಹೊಸನಗರ–ನಗರ–ಮಾಸ್ತಿಕಟ್ಟೆ–ಹುಲಿಕಲ್ ಘಾಟ್–ಹೊಸಂಗಡಿ–ಸಿದ್ದಾಪುರ ಮೂಲಕ ಕುಂದಾಪುರದ ಕಡೆ ಹೋಗುವ ಭಾರೀ ವಾಹನಗಳು, ಶಿವಮೊಗ್ಗ–ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮೂಲಕ ಹೊನ್ನಾವರ–ಭಟ್ಕಳ-ಬೈಂದೂರು–ಕುಂದಾಪುರ ರಸ್ತೆಯ ಮೂಲಕ ಸಂಚರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.













