(ನ್ಯೂಸ್ ಕಡಬ) newskadaba.com ಆಲಂಕಾರು, ಎ.13. ಯಾತ್ರಿಕ ಬದುಕಿಗೆ ಪ್ರೇರಣೆ ನೀಡುವ ಯಂತ್ರಮಾನವನೆಡೆಗೆ ಸಾಗುವ ಶಿಕ್ಷಣದಿಂದ ದೂರ ಸರಿದು ವಿಶ್ವಮಾನವನೆಡೆಗೆ ಕೊಂಡೊಯ್ಯುವ ಶಿಕ್ಷಣ ಇಂದು ಬೇಕಾಗಿದೆ ಎಂದು ಹೊರನಾಡು ಅನ್ನಪುರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ|ಜಿ.ಭೀಮೇಶ್ವರ ಜೋಷಿ ಹೇಳಿದರು.
ಅವರು ಬುಧವಾರ ಆಲಂಕಾರು ಶ್ರೀ ಭಾರತೀ ಶಾಲಾ ರಜತಮಹೋತ್ಸವ ಸಮಿತಿ ವತಿಯಿಂದ ನಡೆಯುತ್ತಿರುವ ರಜತ ಸಂಭ್ರಮದ ಹಿನ್ನೆಯಲ್ಲಿ ನಿರ್ಮಾಣವಾಗಲಿರುವ ಕಟ್ಟಡಗಳ ಕಾಮಗಾರಿಗಳಿಗೆ ಶಿಲ್ಯಾಸ ನೆರವೇರಿಸಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ನಾವು ಇಂದು ಬದಲಾವಣೆಯ ಯುಗದಲ್ಲಿದ್ದೇವೆ, ಬದಲಾವಣೆ ಜಗದ ನಿಯಮವಾದರೂ ನಾವು ನಮ್ಮ ಹಿರಿಯರು ಪಾಲಿಸಿದ ಮೂಲ ತತ್ವವನ್ನು ದೂರವಿಟ್ಟು ಬದಲಾವಣೆಯಾಗುವುದರಿಂದ ಸಮಾಜಕ್ಕೆ ಅಪಾಯವಿದೆ, ನಮ್ಮಲ್ಲಿ ಇಂದು ಶಿಕ್ಷಣಕ್ಕೆ ಕೊರತೆಯಿಲ್ಲ, ಆದರೆ ಅದು ಕೇವಲ ಉದ್ಯೋಗ ಹಾಗೂ ವ್ಯವಹಾರಿಕ ಚಿಂತನೆಯಿಂದ ಮಾತ್ರ ಕೂಡಿದೆ, ಮಕ್ಕಳು ಯೋಗ್ಯವಂತ ವ್ಯಕ್ತಿತ್ವ ಕಾಣುವ ಸಂಸ್ಕಾರಯುತ ಶಿಕ್ಷಣದ ಕೊರತೆ ಎಲ್ಲಡೆ ಕಾಣುತ್ತಿದೆ, ಇಂತಹ ಕಾಲಘಟ್ಟದಲ್ಲಿ ಭಾರತೀಯ ಸಂಸ್ಕೃತಿಯಾಧಾರಿತ ಶಿಕ್ಷಣ ನೀಡುವ ಭಾರತೀ ಶಾಲೆಯಂತಹ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದರು.
ಶ್ರೀ ಭಾರತೀ ಶಾಲೆ ನಡೆದು ಬಂದ ದಾರಿ ವಿಡಿಯೋ ಬಿಡಿಗಡೆಗೊಳಿಸಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ|ಕೃಷ್ಣ ಭಟ್ ಕೊಂಕೋಡಿ ಮಾತನಾಡಿ ಮಾತೃಭಾಷೆಯಲ್ಲಿ ಹಾಗೂ ಸ್ವಂತ ಊರಲ್ಲಿ ಶಿಕ್ಷಣ ದೊರೆತಾಗ ಮಕ್ಕಳ ಒತ್ತಡ ರಹಿತವಾಗಿ ಶಿಕ್ಷಣ ದೊರೆಯುತ್ತದೆ. ಪೋಷಕರು ಇಂದು ಮಕ್ಕಳಿಗೆ ಉತ್ತಮ ಸಂಸ್ಕಾರ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ಪಂಚಮುಖಿ ಶಿಕ್ಷಣದತ್ತ ಒಲವು ತೋರಿಸುತ್ತಿದ್ದಾರೆ ಇದು ಉತ್ತಮ ಬೆಳವಣಿಗೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಲಾ ಅನ್ನಪುರ್ಣ ಪಾಕ ಶಾಲಾ ಕೊಟಡಿಗೆ ಅನುದಾನ ನೀಡುವಂತೆ ಮನವಿ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ರಾಮಚಂದ್ರ ಭಟ್ ಕೂಡೂರು ಕಟ್ಟಡ ನಿಧಿಗೆ ಒಂದು ಲಕ್ಷ ರೂ ಚೆಕ್ ಹಸ್ತಾಂತರಿಸಿದರು. ರಜತ ಸಮಿತಿಯ ಗೌರವ ಉಪಾಧ್ಯಕ್ಷ ಎಸ್.ಕೆ.ಆನಂದ ಮಾತನಾಡಿದರು. ಶಾಲಾ ಸಂಚಾಲಕ ಈಶ್ವರ ಗೌಡ ಪಜ್ಜಡ್ಕ, ರಜತಮಹೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣ ಕುಮಾರ್ ಅತ್ರಿಜಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಾರತೀ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಡಾ|ಸುರೇಶ್ ಕುಮಾರ್ ಕೂಡೂರು ಸ್ವಾಗತಿಸಿದರು. ರಜತ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಆಳ್ವ ವಂದಿಸಿದರು. ಶಿಕ್ಷಕ ಚಂದ್ರಹಾಸ ಕೆ.ಸಿ ಕಾರ್ಯಕ್ರಮ ನಿರೂಪಿಸಿದರು.