ನಾಮಕಾವಸ್ಥೆಯ ಕಡಬದ ಕೆ.ಎಸ್.ಆರ್.ಟಿ.ಸಿ. ಸಂಚಾರ ನಿಯಂತ್ರಣ ಕೇಂದ್ರ

(ನ್ಯೂಸ್ ಕಡಬ) newskadaba.com ಕಡಬ, ಎ.11. ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವ ಕಡಬದಲ್ಲಿ ಕಳೆದ ಕೆಲವು ವರ್ಷಗಳಿಂದ ಸುಸಜ್ಜಿತ ಬಸ್ ತಂಗುದಾಣ ನಿರ್ಮಾಣವಾಗುತ್ತದೆ ಎನ್ನುವ ಕನಸು ಇನ್ನೂ ಈಡೇರಿಲ್ಲ, ಇದರ ಮಧ್ಯೆ ಇಲ್ಲೊಂದು ಕೆ.ಎಸ್.ಆರ್.ಟಿ.ಸಿ. ಪಾಯಿಂಟ್ ಆಗಬೇನ್ನುವ ಇಲ್ಲಿನ ಜನಗಳ ಒತ್ತಾಸೆ ಈಡೆರಿದರೂ ಅದರ ಸಮರ್ಪಕ ನಿರ್ವಹಣೆಯಿಲ್ಲದೆ ನಾಮಕಾವಸ್ಥೆಗೆ ಅನುಷ್ಟಾನವಾಗಿದೆ ಎನ್ನುವಂತಾಗಿದೆ.

ತಾಲೂಕು ಘೋಷಣೆ ಏನೋ ಆಗಿದೆ, ಆದರೆ ಯಾವುದೇ ಮೂಲಭೂತ ವ್ಯವಸ್ಥೆಯೊಂದಿಗೆ ಅನುಷ್ಟಾನದ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ. ಕಡಬದಲ್ಲಿ ಇಂತಹ ಅನೇಕ ಆರಂಭ ಶೂರತ್ವದ ಕಾರ್ಯಗಳು ನೆನೆಗುದಿಗೆ ಬಿದ್ದಿವೆ. ಇನ್ನು ಕೆಲವು ಕಾರ್ಯಗಳು ಇದ್ದೂ ಇಲ್ಲದಂತಾಗಿವೆ, ಅವುಗಳ ಪೈಕಿ ಕೆ.ಎಸ್.ಆರ್.ಟಿ.ಸಿ. ಕಡಬ ಸಂಚಾಯ ನಿಯಂತ್ರಣ ಕೇಂದ್ರ( ಟಿಸಿ) ಪಾಯಿಂಟ್ ಒಂದಾಗಿದೆ. ಇಲ್ಲಿನ ರಾಜಕೀಯ ವ್ಯಕ್ತಿಗಳ ಒತ್ತಡದಿಂದಾಗಿ ಮೂರು ವರ್ಷಗಳ ಹಿಂದೆ ಕಡಬ ಹೃದಯ ಭಾಗದಲ್ಲಿರುವ ಪ್ರಯಾಣಿಕರ ತಂಗುದಾಣದ ಒಂದು ಭಾಗದಲ್ಲಿ ಪ್ರಾರಂಭವಾದ ಟಿಸಿ ಪಾಯಿಂಟ್ ಈಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.

ಸ್ವತಃ ಸಚಿವ ರಮನಾಥ ರೈ ಅವರಿಂದ ಉದ್ಘಾಟಿಸಲ್ಪಟ್ಟ ಈ ಟಿ.ಸಿ ಪಾಯಿಂಟ್ನಲ್ಲಿ ಒಬ್ಬರೇ ನಿಯಂತ್ರಣಾಧಿಕಾರಿ ಇರುವುದರಿಂದ ಇಲ್ಲಿ ಸಮಸ್ಯೆ ಜೀವಂತವಾಗಿದೆ. ಕನಿಷ್ಟ ಮೂಲಭೂತ ವ್ಯವಸ್ಥೆ, ಸಿಬ್ದಂದಿ ಯಾವುದೂ ಇಲ್ಲದ ಈ ಕೇಂದ್ರದಲ್ಲಿ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ಕೂಡಾ ದೊರೆಯುತ್ತಿಲ್ಲ. ಇಲ್ಲಿ ನಿಯಂತ್ರಣಾಧಿಕಾರಿಯವರು ಬೆಳಿಗ್ಗೆ 8 ಗಂಟೆಗೆ ಕರ್ತವ್ಯಕ್ಕೆ ಹಾಜರಾದರೆ ಮಧ್ಯಾಹ್ನ ಹನ್ನೊಂದು ಘಂಟೆಗೆ ಬಾಗಿಲು ಬಂದ್ ಮಾಡಿ ವಿರಾಮಕ್ಕೆ ತೆರಳುತ್ತಾರೆ, ಮತ್ತೆ ಇವರ ಹಾಜರಾತಿ ಮಧ್ಯಾಹ್ನ ಬಳಿಕ ಮೂರುವರೆ ಗಂಟೆಗೆ, ಬಳಿಕ ಸಂಜೆಯ ತನಕ ಕರ್ತವ್ಯ ನಿರ್ವಹಿಸಿ ಮನೆಗೆ ತೆರಳುತ್ತಾರೆ. ಓವರ್ ಟೈಮ್ ಕರ್ತವ್ಯ ನಿರ್ವಹಿಸುವ ಅಗತ್ಯ ಅವರಿಗೂ ಇರುವುದಿಲ್ಲ ಎಂದು ನಾಗರೀಕರು ಹೇಳುತ್ತಾರೆ. ಇದರಿಂದಾಗಿ ಹಗಲು ಹೊತ್ತು ಸುಮಾರು ನಾಲ್ಕು ಗಂಟೆ ತನಕ ಟಿಸಿ ಪಾಯಿಂಟ್ ಮುಚ್ಚಿರುತ್ತದೆ. ಬಂದ್ ವೇಳೆ ಬಸ್ ನಿರ್ವಾಹಕರು ಎಂಟ್ರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

Also Read  ಬಂಟ್ವಾಳ: ಅಕ್ರಮ ಮರಳು ಅಡ್ಡೆಗೆ ದಾಳಿ ► 48 ಬೋಟ್ ಗಳು ಸೇರಿ 60 ಲಕ್ಷ ರೂ‌. ಮೌಲ್ಯದ ಸ್ವತ್ತು ವಶ

ಮಂಗಳೂರು, ಬೆಂಗಳೂರು, ಪುತ್ತೂರು, ನೆಲ್ಯಾಡಿ, ಪಂಜ, ಸುಬ್ರಹ್ಮಣ್ಯ, ಸುಳ್ಯ , ನೂಜಿಬಾಳ್ತಿಲ ಮುಂತಾದೆಡೆ ಸುಮಾರು ನೂರಕ್ಕೂ ಹೆಚ್ಚು ಬಸ್ಸುಗಳು ಕಡಬ ಮುಖಾಂತರ ಓಡಾಟ ಮಾಡುವುದರಿಂದ ಜನರಿಗೆ ಸಮರ್ಪಕ ಮಾಹಿತಿ ಕೂಡಾ ಇಲ್ಲಿ ಸಿಕ್ಕುವುದಿಲ್ಲ. ಅಷ್ಟೇ ಏಕೆ ಇಲ್ಲಿ ಈಗ ಹೆಚ್ಚುವರಿ ಬಸ್ಸುಗಳು ಓಡಾಟ ಮಾಡಿರುವುದರಿಂದ ಅವುಗಳ ವೇಳಾ ಪಟ್ಟಿಯನ್ನೂ ನಮೂದಿಸುವ ಕಾರ್ಯವಾಗಿಲ್ಲ. ಇನ್ನು ಬಸ್ಸುಗಳು ಸರಿಯಾದ ಸಮಯಕ್ಕೆ ಓಡಾಡುವುದೇ ಅಪರೂಪ ಎನ್ನುವಂತಾಗಿದೆ. ಮುಖ್ಯವಾಗಿ ಬೆಳಿಗ್ಗೆ 7.45 ರಿಂದ 8.30 ಮಧ್ಯೆ ಹಾಗೂ 8.45 ರಿಂದ 9.30 ಮಧ್ಯೆ ಯಾವುದೇ ಬಸ್ಸುಗಳು ಇಲ್ಲದೆ ಜನ ಪರದಾಡುತ್ತಿರುತ್ತಾರೆ. ಈ ಬಗ್ಗೆ ಕೂಡಾ ಇಲ್ಲಿ ಸಮರ್ಪಕ ಮಾಹಿತಿ ಇರುವುದಿಲ್ಲ. ಟಿಸಿ ಪಾಯಿಂಟ್ನಲ್ಲಿ ಇನ್ನೋರ್ವ ನಿಯಂತ್ರಣಾಧಿಕಾರಿ ಇದ್ದರೆ ಬಹುತೇಕ ಎಲ್ಲಾ ಸಮಸ್ಯೆಗಳಿಗೆ ಬ್ರೇಕ್ ಬೀಳಬಹುದು. ಆದರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಲಾಖೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಬ್ಗಗೆ ಸ್ಥಳೀಯಾಡಳಿತ ನಿರ್ಣಯ ಮಾಡಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟವರು ಗಮನ ಹರಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.

Also Read  ಚಾರ್ಮಾಡಿ ಘಾಟ್ ದ್ವಿಪಥಗೊಳಿಸಲು 343.74 ಕೋಟಿ ರೂ. ಬಿಡುಗಡೆ- ಸಂಸದ ಕ್ಯಾ.ಚೌಟ

ನಾನು ಅಧ್ಯಕ್ಷನಾಗಿದ್ದ ವೇಳೆ ಪಂಚಾಯಿತಿಯಲ್ಲಿ ನಿರ್ಣಯ ಮಾಡಿ ಸಚಿವ ರಮನಾಥ ರೈಯವರ ಮುಖಾಂತರ ಒತ್ತಡ ಹಾಕಿ ಕಡಬಕ್ಕೆ ಒಂದು ಟಿ.ಸಿ ಪಾಯಿಂಟ್ ಮಂಜೂರು ಮಾಡಲಾಗಿತ್ತು. ಇದೀಗ ಈ ಟಿ.ಸಿ ಪಾಯಿಂಟ್ ಜನೋಪಯೋಗಿ ಆಗದೆ ಇರುವುದು ದುರಂತ, ಇಲ್ಲಿಗೆ ಒಬ್ಬ ಸಿಬಂದಿ ಹೆಚ್ಚುವರಿ ಒಬ್ಬ ನಿಯಂತ್ರಣಾಧಿಕಾರಿಯನ್ನು ನೀಡಬೇಕು ಎಂದು ಅಗ್ರಹಿಸುತ್ತಲೇ ಬರಲಾಗಿದೆ. ಈ ಟಿ.ಸಿ ಪಾಯಿಂಟ್ ಜನಸ್ನೇಹಿಯಾಗಬೇಕಾದರೆ ತಕ್ಷಣ ಒಬ್ಬ ಹೆಚ್ಚುವರಿ ನಿಯಣತ್ರಣಾಧಿಕಾರಿಯನ್ನು ನೀಡಬೇಕು ಎಂದು ಕಡಬ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಹನೀಫ್ ಹೇಳಿದರು.

error: Content is protected !!
Scroll to Top