(ನ್ಯೂಸ್ ಕಡಬ) newskadaba.com ಕಡಬ, ಎ.7. ದೇಶಪ್ರೇಮದ ಕೊರತೆಯಿಂದ ದೇಶದೊಳಗೆ ಅಭದ್ರತೆ ಕಾಡುತ್ತಿದೆ. ಯುವ ಜನತೆ ದೇಶ ಪ್ರೇಮವನ್ನು ಬೆಳೆಸಿಕೊಂಡು ರಕ್ಷಣಾ ಇಲಾಖೆಗೆ ಬಲತುಂಬಬೇಕು . ಯುವ ಜನತೆ ಸೇನೆಗೆ ಸೇರಲು ಮುಂದಾಗಬೇಕು ಎಂದು ಯೋಧ ಝುಬೈರ್ ಹಳೆನೇರಿಂಕಿ ಹೇಳಿದರು.
ಅವರು ಶ್ರೀ ರಾಮಕುಂಜೇಶ್ವರ ಕಾಲೇಜಿನಲ್ಲಿ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆ ಮತ್ತು ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಯಾವೂದೇ ರೀತಿಯಲ್ಲೂ ದೇಶದ ಭದ್ರತೆಗೆ ದಕ್ಕೆಯಾಗದಂತೆ ಯೋಧರು ಹಗಲಿರುಳು ದುಡಿಯುತ್ತಾರೆ. ಇದನೆಲ್ಲ ಮನಗಂಡು ಯೋಧರ ಬೆಂಬಲಕ್ಕೆ ನಿಲ್ಲಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಬೇಕು. ಸೇವೆಯನ್ನು ಗುರುತಿಸಿ ಸನ್ಮಾನಿಸಿರುವುದು ಈ ಸಂಸ್ಥೆಯ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವುದಕ್ಕೆ ಹೆಮ್ಮೆಯಾಗುತ್ತದೆ ಎಂದರು.
ಶಿಕ್ಷಕ ವೆಂಕಟೇಶ್ ದಾಮ್ಲೆ ಮಾತನಾಡಿ, ಕಾಶ್ಮಿರದ ಕಟ್ಟಡವೊಂದರಲ್ಲಿ ಅಡಗಿದ್ದ ಉಗ್ರರನ್ನು ಸದೆಬಡಿದ ನಮ್ಮ ದೇಶದ ಯೋಧರ ತಂಡದಲ್ಲಿ ನಮ್ಮೂರಿನ ಯುವಕ ಕಾಲೇಜಿನ ಹಳೆವಿದ್ಯಾರ್ಥಿ ಝುಬೈರ್ ಪಾಲ್ಗೊಂಡಿರುವುದು ಹೆಮ್ಮೆಯ ವಿಚಾರ. ಇವರ ಧೈರ್ಯ, ಸಾಹಸ, ದೇಶ ಪ್ರೇಮದ ಕಿಚ್ಚು ಯುವ ಜನತೆ ಮಾದರಿಯನ್ನಾಗಿಸಿಕೊಳ್ಳಬೇಕು ಎಂದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ದಕ ಸಭಾಕಾರ್ಯದರ್ಶಿ ಕೆ. ಎಸ್. ರಾಧಕೃಷ್ಣ ಹಾಗು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಕಟ್ಟಪುಣಿ ಸನ್ಮಾನಿಸಿದರು. ಕಾಲೇಜಿನ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಗುರು ಸತೀಶ್ ಭಟ್ ಸ್ವಾಗತಿಸಿ, ವಂದಿಸಿದರು.