(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.2. ಇಮಾಂ ಶಾಫಿ ಇಸ್ಲಾಮಿಕ್ ಅಕಾಡಮಿ ಕುಂಬಳೆ ಇದರ 10ನೇ ವಾರ್ಷಿಕ ಹಾಗೂ ಪ್ರಥಮ ವರ್ಷದ ಸನದುದಾನ ಸಮಾರಂಭ ಎಪ್ರಿಲ್ 10ರಿಂದ 15ರ ತನಕ ಕಂಬಳೆಯಲ್ಲಿ ನಡೆಯಲಿದ್ದು, ಇದರ ಪ್ರಚಾರಾರ್ಥ ಜಾಥಾ ಕಾರ್ಯಕ್ರಮ ಎ. 1ರಂದು ಆತೂರುನಲ್ಲಿ ಸಮಾಪನಗೊಂಡಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಖತೀಬ್ ಹಾದಿ ಅನಸ್ ತಂಙಳ್ ಮಾತನಾಡಿ 2008ರಲ್ಲಿ ಮುಸ್ಲಿಂ ಸಮುದಾಯದ ಬಡ ವಿದ್ಯಾರ್ಥಿಗಳಿಗಾಗಿ ಧಾರ್ಮಿಕ ಮತ್ತು ಲೌಖಿಕ ವಿದ್ಯಾಭ್ಯಾಸ ನೀಡುವ ಪರಿಕಲ್ಪನೆಯೊಂದಿಗೆ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಮುಶಾವರ ಸದಸ್ಯರೂ ಆಗಿರುವ ಶೈಖುನಾ ಎಂ.ಎ. ಖಾಸಿಂ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಆರಂಭಗೊಂಡ ಸಂಸ್ಥೆ ಇಂದು ಬಹಳಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದು, ಇದರ ಪ್ರಥಮ ದಶಮಾನೋತ್ಸವ ಕಾರ್ಯಕ್ರಮವನ್ನು ಯಶಸ್ಸುಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದರು.
ಸಮಾರಂಭದಲ್ಲಿ ಕುಂಬಳೆ ಇಮಾಂ ಶಾಫಿ ಇಸ್ಲಾಮಿಕ್ ಅಕಾಡಮಿಯ ಉಪ ಪ್ರಾಂಶುಪಾಲ ಅಬ್ದುಲ್ ಸಲಾಂ ವಾಫಿ, ಆತೂರು ಮೊಹಿಯುದ್ದೀನ್ ಜುಮಾ ಮಸೀದಿ ಖತೀಬ್
ಹನೀಫ್ ಫೈಝಿ, ಅಬ್ದುಲ್ ರಹಿಮಾಮ್ ಹೈತಮಿ ಮಾತನಾಡಿದರು.
ಯೋಧ ಜುಬೇರ್ ಹಳೆನೇರೆಂಕಿಗೆ ಸನ್ಮಾನ:
ಸಮಾರಂಭದಲ್ಲಿ ಕಳೆದ ಫೆಬ್ರವರಿಯಲ್ಲಿ ಕಾಶ್ಮೀರದ ಕರಣ್ನಗರದ ಕಟ್ಟಡವೊಂದರಲ್ಲಿ ಅಡಗಿ ಕುಳಿತಿದ್ದ ಇಬ್ಬರು ಭಯೋತ್ಪಾದಕರ ವಿರುದ್ಧ ನಡೆದ ಯಶಸ್ವಿ ಸೇನಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಸೇನೆಯಿಂದ ಪ್ರಶಸ್ತಿ ಪಡೆದುಕೊಂಡು ಹುಟ್ಟೂರಿಗೆ ಆಗಮಿಸಿ ಹಳೆನೇರೆಂಕಿ ನಿವಾಸಿ ಜುಬೇರ್ರವರನ್ನು ಈ ಸಂದರ್ಭದಲ್ಲಿ ಊರ ನಾಗರೀಕರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಬದ್ರಿಯಾ ಜುಮಾ ಮಸೀದಿ ಸಮಿತಿ ಸದಸ್ಯ ಬಿ.ಆರ್. ಅಬ್ದುಲ್ ಖಾದರ್, ಎಸ್.ಕೆ.ಎಸ್.ಎಸ್.ಎಫ್. ಮುಖಂಡ ಫಲೂಲುದ್ದೀನ್ ಹೇಂತಾರು ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಅಬ್ದುಲ್ ಮಜೀದ್ ದಾರಿಮಿ ಸ್ವಾಗತಿಸಿ. ಉಮರ್ ದಾರಿಮಿ ವಂದಿಸಿದರು.