(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.23. ನಿವೃತ್ತ ಸರಕಾರಿ ಉದ್ಯೋಗಿಯನ್ನು ಹನಿಟ್ರ್ಯಾಪ್ ನಡೆಸುವ ಮೂಲಕ ಮೂರು ಲಕ್ಷ ರೂ. ವಸೂಲಿ ಮಾಡಿರುವ ಘಟನೆಯು ಮಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು ಘಟನೆಗೆ ಸಂಬಂಧಿಸಿದಂತೆ ಮಂಗಳೂರಿನ ಸಿಸಿಬಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಮೂವರು ಯುವತಿಯರಾಗಿದ್ದು ಉಳಿದವರನ್ನು ಶಕ್ತಿನಗರದ ರಮೇಶ್ (35), ಕಳಸದ ರವಿ (35) ಮತ್ತು ಜೈಲು ರೋಡ್‌ನ ಪ್ರೀತೇಶ್ (36) ಎಂದು ಗುರುತಿಸಲಾಗಿದೆ. ನಿವೃತ್ತ ಸರಕಾರಿ ಉದ್ಯೋಗಿಯೊಬ್ಬರನ್ನು ಯುವತಿಯರಿಂದ ಮಸಾಜ್ ಮಾಡಿಸುವುದಾಗಿ ಆರೋಪಿಗಳು ನಂಬಿಸಿ ಅವರಿಗೆ ದೇರೆಬೈಲ್‌ನಲ್ಲಿರುವ ಯುವತಿಯನ್ನು ಪರಿಚಯ ಮಾಡಿಸಿದ್ದಲ್ಲದೆ ಆಕೆಯ ಮನೆಗೆ ಕಳುಹಿಸಿಕೊಟ್ಟಿದ್ದರು. ಆಕೆಯ ಮನೆಗೆ ತೆರಳಿದ ಸಮಯದಲ್ಲಿ ಅಲ್ಲಿಗೆ ಅಪರಿಚಿತ ಯುವಕರ ತಂಡವೊಂದು ಲಗ್ಗೆ ಇಟ್ಟಿದ್ದು, ಮಸಾಜ್ ಗಾಗಿ ಬಂದ ವ್ಯಕ್ತಿಯನ್ನು ಯುವಕರು ಬಲಾತ್ಕಾರವಾಗಿ ಬೆತ್ತಲೆಗೊಳಿಸಿ, ಯುವತಿಯ ಜೊತೆ ಫೋಟೋ ಹಾಗು ವೀಡಿಯೋ ತೆಗೆಸಿದೆ. ಬಳಿಕ ವ್ಯಕ್ತಿಯ ಬಳಿ ಮೂರು ಲಕ್ಷ ರೂ. ಹಣ ನೀಡುವಂತೆ ಆರೋಪಿಗಳು ಬ್ಲ್ಯಾಕ್‌ಮೇಲ್ ಮಾಡಿದ್ದಲ್ಲದೆ 3 ಲಕ್ಷ ರೂ.ಗಳನ್ನು ಆರೋಪಿ ರವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿದ್ದರು.
ಘಟನೆ ನಡೆದ ಕೆಲವು ದಿನಗಳ ಬಳಿಕ ಪುನಃ ಹಣ ನೀಡುವಂತೆ ಆರೋಪಿಗಳು ತಾಕೀತು ಮಾಡಿದ್ದು, ಇಲ್ಲವಾದರೆ ಯುವತಿ ಜೊತೆಗಿದ್ದ ವೀಡಿಯೋ, ಫೋಟೋವನ್ನು ವಾಟ್ಸಪ್, ಫೇಸ್ಬುಕ್ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಗಾಬರಿಯಾದ ವ್ಯಕ್ತಿಯು ಕಾವೂರು ಪೊಲಿಸ್ ಠಾಣೆಗೆ ದೂರು ನೀಡಿದ್ದರು. ತನಿಖೆಯನ್ನು ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಸಫಲರಾಗಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.