ರಾಷ್ಟ್ರೀಯ ಆಯುರ್ವೇದ ದಿನಾಚರಣೆ; ಅಸಮರ್ಪಕ ಜೀವನಶೈಲಿಯಿಂದ ಆರೋಗ್ಯಕ್ಕೆ ಆಪತ್ತು- ಮಮತಾ ಗಟ್ಟಿ

(ನ್ಯೂಸ್ ಕಡಬ) newskadaba.com ಅ. 30. ನಮ್ಮ ದೈನಂದಿನ ಜೀವನದಲ್ಲಿ ಶಿಸ್ತುರಹಿತ ಆಹಾರ ಸೇವನೆ ಮತ್ತು ಅಸಮರ್ಪಕ ಜೀವನ ಶೈಲಿಯಿಂದಾಗಿ ನಮ್ಮ ಆರೋಗ್ಯ ಇಂದು ಅನಾರೋಗ್ಯಕ್ಕೆ ಕಾರಣವಾಗಿದೆ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ತಿಳಿಸಿದ್ದಾರೆ. ಅವರು ಮಂಗಳವಾರದಂದು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಆಯುಷ್ ಕಾಲೇಜುಗಳು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ವೆನ್‍ ಲಾಕ್ ಆಯುಷ್ ಸಂಯುಕ್ತ ಆಸ್ಪತ್ರೆಯಲ್ಲಿ ನಡೆದ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಾಯಿಗೆ ಚಪಲಕ್ಕೆ ತಕ್ಕಂತೆ ಆಹಾರ ಸೇವನೆ ಹಾಗೂ ಅಸುರಕ್ಷಿತ ರೀತಿಯಲ್ಲಿ ತಯಾರಿಸಿದ ಆಹಾರಗಳ ಸೇವನೆಯಿಂದ ನಮ್ಮ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ತಲಾತಲಾಂತರಗಳಿಂದ ಅನುಸರಿಸಿಕೊಂಡು ಬಂದಿರುವ ಆಯುರ್ವೇದ ಅಂಶಗಳನ್ನು ಒಳಗೊಂಡ ಆಹಾರವನ್ನು ನಾವು ಬಳಸಬೇಕೆಂದು ಅವರು ತಿಳಿಸಿದರು.

ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಇರುವ ಆಯುರ್ವೇದವು ನಮ್ಮ ಜೀವನದ ದೈನಂದಿನ ಅಂಗವಾಗಿದೆ. ಋಷಿ ಮುನಿಗಳಿಂದ ಇಂದಿನವರೆಗೆ ಆಯುರ್ವೇದದಿಂದ ಉತ್ತಮ ಹಾಗೂ ದೀರ್ಘ ಜೀವನ ಪಡೆಯಲು ಸಹಕಾರಿಯಾಗಿದೆ ಎಂದು ಹೇಳಿದರು.

Also Read  ಮಂಗಳೂರು: ಡ್ರಗ್ಸ್ ಸಾಗಾಟ ಮಾಡತ್ತಿದ್ದ ಡ್ಯಾನ್ಸರ್‌ ಕಿಶೋರ್‌ ಶೆಟ್ಟಿ ಬಂಧನ..!!

ಭಾರತೀಯ ಆಯುಷ್ ಫೆಡರೇಶನ್ ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣ ಗೋಖಲೆ ಮಾತನಾಡಿ, ಆಯುರ್ವೇದದಿಂದ ರೋಗ ನಿಧಾನವಾಗಿ ವಾಸಿಯಾಗುತ್ತದೆ ಎಂಬ ವಾದ ಸರಿಯಲ್ಲ. ಜನರು ರೋಗದಿಂದ ಬಳಲಿ ಬೇರೆ ಪದ್ಧತಿಯ ಔಷದ ಬಳಸಿ ಕಾಯಿಲೆ ವಾಸಿ ಆಗದಿದ್ದರೆ ಆಯುರ್ವೇದ ಪದ್ಧತಿಯ ಮೊರೆ ಹೋಗುತ್ತಾರೆ. ಇದರಿಂದ ರೋಗ ಬಂದು ದೀರ್ಘಕಾಲವಾಗಿರುವುದರಿಂದ ಔಷಧಿಯು ಪರಿಣಾಮಕಾರಿಯಾಗಲು ಸಾಧ್ಯವಿಲ್ಲ. ಆರಂಭದ ಹಂತದಲ್ಲಿಯೇ ಆಯುರ್ವೇದ ಅನುಸರಿಸುವುದರಿಂದ ಆರೋಗ್ಯದಲ್ಲಿ ಸುಧಾರಣೆ ಸಾಧ್ಯವಿದೆ ಎಂದರು. ಸಾಮಾಜಿಕ ಜಾಲತಾಣದಲ್ಲಿ ಬರುವ ವಿವಿಧ ಔಷಧಿಗಳ ಮಾಹಿತಿ ಹಾಗೂ ವೈದ್ಯಕೀಯ ಸಲಹೆಗಳನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮವಾಗಿದೆ ಎಂದು ಅವರು ಹೇಳಿದರು.

ಎಸ್.ಡಿ.ಎಂ ಆಯುರ್ವೇದ ಕಾಲೇಜು ಪ್ರಾಂಶುಪಾಲರಾದ ಡಾ. ಮಮತಾ ಕೆ.ಪಿ ಅವರು “ಮಹಿಳಾ ಸಬಲೀಕರಣಕ್ಕಾಗಿ ಆಯುರ್ವೇದ” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಎ ಖಾದರ್ ಶಾ, ಆಯುಷ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಝಾಹೀದ್,ಡಾ. ಗೋಪಾಲಕೃಷ್ಣ ನಾಯಕ್, ಡಾ. ನೂರುಲ್ಲಾ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಮುಹಮ್ಮದ್ ಇಕ್ಬಾಲ್ ಸ್ವಾಗತಿಸಿದರು, ಶೋಭಾ ರಾಣಿ ವಂದಿಸಿದರು.

error: Content is protected !!
Scroll to Top