ಶಾಲಾ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ನಿಗಾವಹಿಸಿ- ಶಿಕ್ಷಕರಿಗೆ ಜಿ.ಪಂ ಸಿಇಓ ಕರೆ

(ನ್ಯೂಸ್ ಕಡಬ) newskadaba.com ಅ. 30. ಶಾಲಾ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ತಿಳಿದುಕೊಂಡು ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ಉದ್ದೇಶದಿಂದ ಮನೋಸ್ಥೈರ್ಯ ತರಬೇತಿ ಕಾರ್ಯಕ್ರಮವನ್ನು ಶಿಕ್ಷಕರಿಗೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್.ಕೆ ಅವರು ಹೇಳಿದರು. ಅವರು ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ “ಮನೋಸ್ಥೆರ್ಯ” ಪ್ರೌಢಶಾಲಾ ಶಿಕ್ಷಕರಿಗೆ ಮಾನಸಿಕ ಆರೋಗ್ಯದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಾನಸಿಕ ಆರೋಗ್ಯದ ಬಗ್ಗೆ ಜನರು ಮುಕ್ತವಾಗಿ ಚರ್ಚಿಸಲು ಹಿಂದೇಟು ಹಾಕುತ್ತಾರೆ, ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡಲು ರಾಷ್ಟ್ರೀಯ ಮಾನಸಿಕ ಅರೋಗ್ಯ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಶಾಲಾ ಮಕ್ಕಳಲ್ಲಿ ಇರುವ ಮಾನಸಿಕ ರೋಗವನ್ನು ಪತ್ತೆಹಚ್ಚಿ ಅವರಿಗೆ ಸರಿಯಾದ ಮಾರ್ಗದರ್ಶನವನ್ನು ನೀಡಲು ಶಿಕ್ಷಕರಿಗೆ ಈ ತರಬೇತಿಯನ್ನು ನೀಡಲಾಗುತ್ತಿದೆ.

ಮಕ್ಕಳಲ್ಲಿ ಭಯ, ಆತಂಕದಂತಹ ಭಾವನೆಗಳು ಕಂಡುಬಂದರೆ ಮಗುವಿನ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಇಂತಹ ಮಕ್ಕಳನ್ನು ಕೂಡಲೇ ಶಿಕ್ಷಕರೂ ಗಮನಿಸಿಸಬೇಕು. ವಿದ್ಯಾರ್ಥಿಯ ಚಲನವಲನಗಳನ್ನು ಗಮನಿಸಿ ಅವರಲ್ಲಿ ಆಗುತ್ತಿರುವ ಬದಲಾವಣೆಯನ್ನು ಗುರುತಿಸಿ ಅವರೊಂದಿಗೆ ಮುಕ್ತವಾಗಿ ಸಮಾಲೋಚನೆ ನಡೆಸಬೇಕು ಮುಂದೆ ಅವರ ಜೀವನದಲ್ಲಿಯೂ ಕೂಡ ಶಿಕ್ಷಕರು ನೀಡಿರುವ ಮಾರ್ಗದರ್ಶನ, ಆತ್ಮವಿಶ್ವಾಸ, ಧೈರ್ಯ ಸಹಾಯವಾಗುತ್ತದೆ. ಮಕ್ಕಳಿಗೆ ಯಾವುದೇ ಮಾದಕ ವಸ್ತುಗಳು ತಲುಪದಂತೆ ನಿಗಾ ವಹಿಸಬೇಕು ಎಂದರು.

Also Read  ಮಾನ್ಸೂನ್ ನಿರೀಕ್ಷೆಯಲ್ಲಿದ್ದ ಕಾರಾವಳಿ ತೀರದ ಜನರಿಗೆ ಕಾಡುತ್ತಿದೆ ಚಂಡಮಾರುತ ಭೀತಿ

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ಎಸ್ ಪಟಗಾರ್ ಮಾತನಾಡಿ, ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ವಿಚಾರಿಸುವ ಮೊದಲು ಶಿಕ್ಷರ ಮಾನಸಿಕ ಅರೋಗ್ಯ ಉತ್ತಮವಾಗಿರಬೇಕು. ಶಿಕ್ಷಕರು ಮನೋಸ್ಥೈರ್ಯ ಹೊಂದಿರಬೇಕು. ಶಿಕ್ಷಕರು ತರಗತಿಗೆ ಪ್ರವೇಶಿಸುವ ಮೊದಲು ತಮ್ಮ ವೈಯಕ್ತಿಕ ಬದುಕಿನ ಸಮಸ್ಯೆಗಳನ್ನು ಮರೆತು ಮಕ್ಕಳೊಂದಿಗೆ ಬೇರೆಯಬೇಕು. ಪ್ರತಿಯೊಂದು ಮಗುವಿನ ಆಲೋಚನೆಗಳು ವಿಭಿನ್ನವಾಗಿರುತ್ತದೆ. ಶಿಕ್ಷಕನಾದವನು ಇವೆಲ್ಲವನ್ನೂ ತಿಳಿದುಕೊಂಡು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಬೇಕು. ಮಕ್ಕಳ ನಡವಳಿಕೆಯಲ್ಲಿ ಯಾವುದೇ ರೀತಿ ಬದಲಾವಣೆಯಾದರೂ ಶಿಕ್ಷಕರು ತಿಳಿದುಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಚ್ ಆರ್ ತಿಮ್ಮಯ್ಯ ಅವರು ಮಾತನಾಡಿ, ಮಕ್ಕಳ ಮನಸ್ಸಿನಲ್ಲಿ ಸಣ್ಣ ವಿಷಯಗಳು ಕೂಡ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇಂದಿನ ಒತ್ತಡ ಜಗತ್ತಿನ ವಿಭಕ್ತ ಕುಟುಂಬಗಳಲ್ಲಿ ತಂದೆ ತಾಯಿ ಇಬ್ಬರು ಕೆಲಸಕ್ಕೆ ಮಗುವಿನ ಬಗ್ಗೆ ಕಾಳಜಿ ವಹಿಸುವುದು ಕಡಿಮೆಯಾದಾಗ ಮಗುವಿನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂದಿನ ತರಬೇತಿಯನ್ನು ಮುಗಿಸಿ ಹೋದ ನಂತರ ಶಿಕ್ಷಕರು ತಮ್ಮ ಸಹೋದ್ಯೋಗಿಗಳಿಗೂ ತರಬೇತಿಯ ಬಗ್ಗೆ ಮಾಹಿತಿ ನೀಡಿದಾಗ ಮಕ್ಕಳ ಮಾನಸಿಕ ಅರೋಗ್ಯ ಉತ್ತಮವಾಗಿಸುವ ಕೆಲಸ ಉನ್ನತವಾಗುತ್ತದೆ ಎಂದರು.

Also Read  ಮಂಗಳೂರು ಏರ್ಪೋರ್ಟ್ ರನ್ ವೇ ತಪಾಸಣೆಗೆ ಕಾರ್ಯಪಡೆ ರಚನೆ

ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಮನೋರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಿಥುನ್, ಫಾದರ್ ಮುಲ್ಲರ್ ಆಸ್ಪತ್ರೆಯ ವಿಭಾಗ ಮುಖ್ಯಸ್ಥೆ ಡಾ. ಸುಪ್ರೀಯಾ ಹೆಗ್ಡೆ, ಮನೋರೋಗ ತಜ್ಞರು ಡಾ.ಕೆರೋಲಿನ್ ಡಿ’ಸೋಜ, ಲಿಂಕ್ ವ್ಯಸನ ಮುಕ್ತ ಕೇಂದ್ರದ ಆಡಳಿತಾಧಿಕಾರಿ ಲಿಡಿಯಾ ಲೋಬೋ ಶಿಕ್ಷಕರಿಗೆ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಡಯಟ್ ಉಪನಿರ್ದೇಶಕಿ ರಾಜಲಕ್ಷ್ಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳೆಪಾಡಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಸುದರ್ಶನ್ ಸಿ.ಎಂ, ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಸುಮಂಗಳಾ ಎಸ್ . ನಾಯಕ್, ಮನೋರೋಗ ತಜ್ಞೆ ಡಾ. ಪ್ರಜಕ್ತಾ ವಿ.ರಾವ್ ಮತ್ತಿತರರರು ಉಪಸ್ಥಿತರಿದ್ದರು.

error: Content is protected !!
Scroll to Top