ಕಡಬ: ಲೋಕಾಯುಕ್ತ ಅಧಿಕಾರಿಗಳಿಂದ ಭ್ರಷ್ಟಾಚಾರದ ವಿರುದ್ದ ಜಾಗೃತಿ

(ನ್ಯೂಸ್ ಕಡಬ) newskadaba.com ಕಡಬ, ಅ. 29. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕಿದ್ದರೆ ಜನರ ಸಹಕಾರ ಅತ್ಯಗತ್ಯ. ಲಂಚ ತೆಗೆದುಕೊಳ್ಳುವುದು ಮಾತ್ರವಲ್ಲ, ಕೊಡುವುದು ಕೂಡ ಅಪರಾಧ ಎಂದು ಕರ್ನಾಟಕ ಲೋಕಾಯುಕ್ತ ದ.ಕ. ಜಿಲ್ಲಾ ಡಿವೈಎಸ್‌ಪಿ ಡಾ।ಗಾನಾ ಪಿ.ಕುಮಾರ್ ಹೇಳಿದರು. ಅವರು ಸೋಮವಾರದಂದು ಕಡಬ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಲೋಕಾಯುಕ್ತ ದ.ಕ. ಜಿಲ್ಲಾ ಪೊಲೀಸ್ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ಭ್ರಷ್ಟಾಚಾರ ವಿರುದ್ಧದ ಜಾಗೃತಿ ಅರಿವು ಸಪ್ತಾಹ-2024ರ ಅಂಗವಾಗಿ ನಡೆದ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರಕಾರಿ ಕಚೇರಿಗಳಲ್ಲಿ ಯಾವುದೇ ಸಾರ್ವಜನಿಕರ ಕೆಲಸಗಳನ್ನು ನಿರ್ವಹಿಸಲು ಲಂಚದ ಬೇಡಿಕೆ ಇಟ್ಟರೆ, ಅರ್ಜಿಗಳ ವಿಲೇವಾರಿ ಮಾಡುವಲ್ಲಿ ಅನಗತ್ಯ ವಿಳಂಬ ಮಾಡಿದರೆ, ಸರಕಾರಿ ಹಣದ ದುರ್ಬಳಕೆ ಮಾಡಿದರೆ ಹಾಗೂ ಇನ್ನಿತರ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ದೂರುಗಳನ್ನು ನಮಗೆ ನೇರವಾಗಿ ನೀಡಬಹುದು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಮಾತನಾಡಿ, ಎಲ್ಲಾ ಇಲಾಖೆಯಲ್ಲಿ ಎಲ್ಲರೂ ಭ್ರಷ್ಟರಾಗಿರುವುದಿಲ್ಲ. ಕೆಲವರು ಮಾಡುವ ಕೆಟ್ಟ ಕೆಲಸದಿಂದ ಎಲ್ಲರಿಗೂ ಕೆಟ್ಟ ಹೆಸರು ಬರುತ್ತಿದೆ. ಅದನ್ನು ತಪ್ಪಿಸಲು ಲೋಕಾಯುಕ್ತ ಉತ್ತಮ ಹೆಜ್ಜೆಯನ್ನಿಟ್ಟಿದೆ ಎಂದರು. ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಸುರೇಶ್, ಕಡಬ ಠಾಣಾ ಪಿಎಸ್‌ಐ ಅಕ್ಷಯ ಡವಗಿ ಉಪಸ್ಥಿತರಿದ್ದರು. ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಪೆಕ್ಟರ್ ಚಂದ್ರಶೇಖರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಲೋಕಾಯುಕ್ತ ಪೊಲೀಸ್ ಸಿಬಂದಿ ಮಹೇಶ್ ನಿರೂಪಿಸಿದರು. ಕಡಬ ಠಾಣಾ ಸಿಬಂದಿ ಹರೀಶ್ ವಂದಿಸಿದರು.

Also Read  ಎಣಿತಡ್ಕ: ದೈವಗಳ ಪುನಃಪ್ರತಿಷ್ಠಾಮಹೋತ್ಸವ ಹಾಗೂ ನೇಮೋತ್ಸವ

ಪೆರಾಬೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿವೇಶನಕ್ಕೆ ಜಾಗ ನಿಗದಿಪಡಿಸಿದರೂ ಈವರೆಗೆ ಗಡಿಗುರುತು ಮಾಡಿಲ್ಲ, ಕುಟ್ರುಪ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಮುಳಿಯದಲ್ಲಿ ಗದ್ದೆಗೆ ಮಣ್ಣುಹಾಕಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿದೆ. ಕೃಷಿ ನಾಶವಾಗುತ್ತಿದೆ, ಕೊಣಾಜೆ ಗ್ರಾ.ಪಂ.ನಲ್ಲಿ ಒಂದೇ ಕಾಮಗಾರಿಗೆ ಬೇರೆ ಬೇರೆ ಬಿಲ್ ಮಾಡಿ ಭ್ರಷ್ಟಚಾರ ಎಸಗಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಶಿರಾಡಿಯಲ್ಲಿ ಸ್ಮಶಾನ ನಿರ್ಮಾಣ ಮಾಡಲು ಮುಂದಾದರೂ ಅಲ್ಲಿ ಜಾಗವೇ ಇಲ್ಲ. ಕಡಬ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ, ಕೆಲವು ಸರಕಾರಿ ಶಾಲಾ ಶಿಕ್ಷಕರು ಶಾಲಾ ಅವಧಿಯಲ್ಲಿ ಪಾಠ ಮಾಡದೆ ಅನಧಿಕೃತವಾಗಿ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮಕ್ಕಳಿಗೆ ಅನ್ಯಾಯವೆಸಗುತ್ತಿದ್ದಾರೆ. ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದ ಸರಕಾರಿ ಅಧಿಕಾರಿಗಳಿಗೆ ಭಡ್ತಿ ನೀಡಿ ವರ್ಗಾವಣೆ ಮಾಡಿದ ಪ್ರಕರಣಗಳ ಬಗ್ಗೆ ಸಭೆಯಲ್ಲಿದ್ದ ಸಾರ್ವಜನಿಕರು ದೂರಿದರು. ಶಶಿಧರ್ ಬೊಟ್ಟತ್ತಾಯ ಪುಷ್ಪಾವತಿ, ವಿಕ್ಟರ್, ಲೋಕಯ್ಯ ಗೌಡ ಕೊಣಾಜೆ, ಫಯಾಜ್ ಕುಂತೂರು, ವಿನೀಶ್ ಬಿಳಿನೆಲೆ, ಕುಶಾಲಪ್ಪ ಗೌಡ ಕಾಳಪ್ಪಾರು ಮೊದಲಾದವರು ಅಹವಾಲು ಸಲ್ಲಿಸಿದರು.

error: Content is protected !!
Scroll to Top