ಸರಕಾರಿ ಉದ್ಯೋಗ ಕೊಡಿಸುವುದಾಗಿ 13 ಲಕ್ಷ ರೂ. ವಂಚನೆ – ಪೆರ್ಲದ ಯುವತಿ ವಿರುದ್ದ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಅ. 25. ಸರಕಾರಿ ಉದ್ಯೋಗ ಒದಗಿಸಿಕೊಡುವ ಭರವಸೆ ನೀಡಿ 13.11 ಲಕ್ಷ ರೂ. ಪಡೆದು ವಂಚಿಸಿದ ಆರೋಪದಡಿ ಪೆರ್ಲದ ಸಚಿತಾ ರೈ ಎಂಬಾಕೆಯ ವಿರುದ್ಧ ಕೊಯಿಲ ಗ್ರಾಮ ನಿವಾಸಿ ರಕ್ಷಿತಾ ಕೆ. ನೀಡಿದ ದೂರಿನನ್ವಯ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದೂರಿನ ಪ್ರಕಾರ, ಪೆರ್ಲದ ಬರಮೇಲು ಮನೆ ನಿವಾಸಿ ಅಶ್ವಿನ್ ಕುಮಾರ್ ಶೆಟ್ಟಿ ಎಂಬವರ ಪತ್ನಿ ರಕ್ಷಿತಾ ಎಂಬವರ ಕ್ಲಾಸ್ ಮೇಟ್ ಆಗಿರುವ ಸಚಿತಾ ರೈ ಎಂಬವರು ಇರಿಗೇಶನ್ ಇಲಾಖೆಯಲ್ಲಿ ಕೆಲಸಕೊಡುವುದಾಗಿ ಹೇಳಿ 2,50,000 ರೂ. ಹಣವನ್ನು ನೀಡುವಂತೆ ಕೇಳಿದ್ದರು. ಅದರಂತೆ ದಿನಾಂಕ 12-೦9-2024ರಂದು ಉಪ್ಪಿನಂಗಡಿ ಎಸ್ಬಿಐ ಬ್ಯಾಂಕ್ ಮುಖೇನ ರೂ 2,5೦,೦೦೦/-ಹಣವನ್ನು ರಕ್ಷಿತಾ ಅವರು ಕಳುಹಿಸಿಕೊಟ್ಟಿದ್ದರು. ಇದಾದ ಬಳಿಕ ಆರೋಪಿತೆ ಪುತ್ತೂರು ಎಸ್.ಬಿ.ಐ ಬ್ಯಾಂಕ್‌ನಲ್ಲಿ ಕೆಲಸ ಮಾಡಿಸಿಕೊಡುವುದಾಗಿ ಹೇಳಿ ಇದಕ್ಕೆ ಹಣ ನೀಡುವಂತೆ ಕೇಳಿದ್ದು, ಅದರಂತೆ ದಿನಾಂಕ: 13-೦9-2024ರಿಂದ ದಿನಾಂಕ: 23-೦9-2024 ರ ವರೆಗೆ ಬೇರೆ ಬೇರೆ ದಿನಗಳಲ್ಲಿ ಒಟ್ಟು ರೂ 13,11,600/- ರೂಪಾಯಿಯನ್ನು ಬ್ಯಾಂಕ್ ಮುಖೇನ ನೀಡಿದ್ದು ನಂತರ ಆರೋಪಿ ಕೆಲಸವನ್ನು ಕೊಡಿಸದೇ ಇದ್ದಾಗ ಈ ಬಗ್ಗೆ ವಿಚಾರಿಸಿದ್ದು, ಈ ವೇಳೆ ಆರೋಪಿತೆ ಇಂಟರ್‌ವ್ಯೂ ದಿನಾಂಕ ತಿಳಿಸುವುದಾಗಿ ತಿಳಿಸಿದ್ದಳು. ಕೆಲಸ ಕೊಡಿಸುವ ಬಗ್ಗೆ ತಾನು ಆಕೆಯಲ್ಲಿ ಪದೇ ಪದೇ ಕೇಳಿದಾಗಲೂ ಕೆಲಸ ಕೊಡಿಸುವುದಾಗಿ ಹೇಳಿ ಬಳಿಕ ಈವರೆಗೆ ಆಕೆ ಕೆಲಸವನ್ನೂ ಕೊಡಿಸದೇ ಇರುವುದಲ್ಲದೇ ತನ್ನಿಂದ ಪಡೆದುಕೊಂಡಿರುವ ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುತ್ತಾಳೆಂದು ರಕ್ಷಿತಾ ಅವರು ದೂರಿನಲ್ಲಿ ಆಪಾದಿಸಿರುತ್ತಾರೆ. ದೂರನ್ನು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top