ಕಡಬ: 7ನೇ ವೇತನ ಆಯೋಗದಡಿ ಪಿಂಚಣಿ ಸೌಲಭ್ಯಕ್ಕೆ ನಿವೃತ್ತ ನೌಕರರ ವೇದಿಕೆಯಿಂದ ಹಕ್ಕೊತ್ತಾಯ-‌ಸದಸ್ಯತ್ವ ಅಭಿಯಾನ

(ನ್ಯೂಸ್ ಕಡಬ) newskadaba.com ಅ.25. ನಿವೃತ್ತ ನೌಕರರಿಗೆ ಸಿಗಬೇಕಾದ ಹಕ್ಕಿನ ಮೊತ್ತ ಸಿಗುತ್ತಿಲ್ಲ. ರಾಜ್ಯ ಸರಕಾರಕ್ಕೆ ನಮ್ಮ ಸಮಸ್ಯೆಯನ್ನು ಮುಟ್ಟಿಸಿ 7ನೇ ವೇತನ ಆಯೋಗದಡಿಯಲ್ಲಿ ಪಿಂಚಣಿ ಸೌಲಭ್ಯ ನೀಡಬೇಕೆಂದು ಹಕ್ಕೊತ್ತಾಯ ಮಂಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆಯ ಜಿಲ್ಲಾ ಘಟಕದ ಸಹ ಸಂಚಾಲಕಿ ಮಂಜುಳಾ ಹೇಳಿದರು. ಅವರು ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಸಭಾಭವನದಲ್ಲಿ ನಡೆದ 1-7-2022 ರಿಂದ 31-7-2024ರ ಅವಧಿಯಲ್ಲಿ ನಿವೃತ್ತರಾದ ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆಯ ಸದಸ್ವತ್ವ ಅಭಿಯಾನ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ನಿವೃತ್ತರಾದ ನೌಕರರಿಗೆ 6ನೇ ವೇತನ ಆಯೋಗದಡಿಯಲ್ಲಿ ಪಿಂಚಣಿ ಸೌಲಭ್ಯ ನೀಡಲಾಗುತ್ತಿದ್ದು, ಇದನ್ನು ಪರಿಷ್ಕರಿಸಿ 7ನೇ ವೇತನ ಆಯೋಗದಡಿಯಲ್ಲಿ ನೀಡಬೇಕು. ಜೂ.1, 2022ರಿಂದ ಜು.31, 2024ರ ಅವಧಿಯಲ್ಲಿ ರಾಜ್ಯದಲ್ಲಿ 17,632 ಮಂದಿ ನೌಕರರು ವಿವಿಧ ಇಲಾಖೆಗಳಿಂದ ನಿವೃತ್ತರಾಗಿದ್ದಾರೆ. ಈ ಎಲ್ಲಾ ನಿವೃತ್ತ ನೌಕರರಿಗೆ ಈಗ ನೀಡುತ್ತಿರುವ ಪಿಂಚಣಿ ವ್ಯವಸ್ಥೆಯಲ್ಲಿ ಕಡಿಮೆ ಪಿಂಚಣಿ ಸೌಲಭ್ಯ ಸಿಗುತ್ತಿದೆ. ಇದರಿಂದ ನಿವೃತ್ತ ನೌಕರರಿಗೆ ಸಿಗಲೇಬೇಕಾದ ಹಕ್ಕಿನ ಮೊತ್ತ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರಕ್ಕೆ ನಮ್ಮ ಸಮಸ್ಯೆಯನ್ನು ಮುಟ್ಟಿಸುವ ಕೆಲಸ ನಡೆಸಲಾಗುತ್ತಿದೆ. ಅದಕ್ಕಾಗಿ ನಾವು ನಮ್ಮ ಸೇವೆಯ ಎಸ್.ಆರ್ ಸಹಿತ ದಾಖಲೆಗಳನ್ನು ಅರ್ಜಿ ಫಾರಂನಲ್ಲಿ ದಾಖಲಿಸಬೇಕಾಗಿದೆ. ಈ ಅವಧಿಯಲ್ಲಿ ನಿವೃತ್ತರಾದ ಎಲ್ಲಾ ನೌಕರರು ತಕ್ಷಣ ಇದನ್ನು ಮಾಡಬೇಕು ಎಂದು ಅವರು ಹೇಳಿದರು.

Also Read  ಸಿನಿಮಾ ಪೈರಸಿ ಹಿನ್ನಲೆ ➤ ತಮಿಳ್ ರಾಕರ್ಸ್ ವೈಬ್‍ಸೈಟ್ ಸಂಪೂರ್ಣ ಬ್ಲಾಕ್

ವೇದಿಕೆಯಲ್ಲಿ ಜಿಲ್ಲಾ ವೇದಿಕೆಯ ಸಹ ಸಂಚಾಲಕಿ ವಿಜಯಾ ಪೈ, ಪುತ್ತೂರು ತಾಲೂಕು ಘಟಕದ ಸಂಚಾಲಕ ಜೆರಾಲ್ಡ್ ಮಸ್ಕರೇನಸ್, ಕಡಬ ತಾಲೂಕು ಘಟಕದ ಸಂಚಾಲಕ ಗಣೇಶ್ ಎ. ಉಪಸ್ಥಿತರಿದ್ದರು. ತಾಲೂಕು ಸಂಚಾಲಕ ಗಣೇಶ್ ಪಿ., ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಡಬ ತಾಲೂಕು ಸಹ ಸಂಚಾಲಕಿ ಸೂಸಮ್ಮ ಪಿ.ಎಸ್.ವಂದಿಸಿದರು.

error: Content is protected !!
Scroll to Top