(ನ್ಯೂಸ್ ಕಡಬ)newskadaba.com ಮಂಗಳೂರು,ಆ.06. ಸಕಲೇಶಪುರದ ಎಡಕುಮೇರಿ ಮತ್ತು ಕಡಗರಳ್ಳಿ ನಡುವಿನ ದೋಣಿಗಲ್ ನಲ್ಲಿ ಭೂಕುಸಿತದಿಂದ ಸ್ಥಗಿತಗೊಂಡಿರುವ ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರ ಆಗಸ್ಟ್ 8ರ ನಂತರವೇ ಪುನರಾರಂಭಗೊಳ್ಳಲಿದೆ ಎಂದು ಮೈಸೂರು ರೈಲ್ವೆ ವಿಭಾಗ ಮಾಹಿತಿ ನೀಡಿದೆ.
ಭಾರೀ ಭೂಕುಸಿತದಿಂದ ಹಳಿಯ ಮೇಲೆ ಮಣ್ಣು ಬಿದ್ದಿತ್ತು. ಪರಿಣಾಮ 12 ರೈಲುಗಳ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಜೊತೆಗೆ ಕೆಲವು ರೈಲುಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿತ್ತು.
ಘಟನಾ ಸ್ಥಳದ ಪಕ್ಕದಲ್ಲಿ ರಿಟೈನರ್ ವಾಲ್ ನಿರ್ಮಾಣ ಕಾರ್ಯವು ತ್ವರಿತ ಗತಿಯಲ್ಲಿ ಸಾಗುತ್ತಿದೆ. ಟ್ರ್ಯಾರಕ್ ಕಂಡೀಷನಿಂಗ್ ಕೆಲಸ ಬಹುತೇಕ ಪೂರ್ಣಗೊಂಡಿದೆ. ದುರಸ್ತಿ ಮಾಡಿದ ಹಳಿಯ ಮೇಲೆ ಗೂಡ್ಸ್ ರೈಲುಗಳ ಪ್ರಾಯೋಗಿಕವಾಗಿ ಓಡಿಸಲಾಗುತ್ತದೆ. ಆದಾಗ್ಯೂ, ಪ್ಯಾಸೆಂಜರ್ ರೈಲಿಗೆ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಲಾಗುತ್ತಿದೆ. ಈ ಹಿನ್ನೆಲೆ ಆಗಸ್ಟ್ 8 ರವರೆಗೆ ಮಂಗಳೂರು ಮತ್ತು ಬೆಂಗಳೂರು ನಡುವೆ ಯಾವುದೇ ರೈಲು ಸೇವೆ ಇರುವುದಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.