(ನ್ಯೂಸ್ ಕಡಬ)newskadaba.com ಕೇರಳ, ಜು.30. ಕೇರಳದ ವಯ್ನಾಡ್ ನಲ್ಲಿ ಭೀಕರ ಭೂಕುಸಿತ ಸಂಭವಿಸಿದೆ. ಇದರಲ್ಲಿ ಸಂಪೂರ್ಣ ನಾಲ್ಕು ಗ್ರಾಮಗಳೇ ನಾಪತ್ತೆಯಾಗಿವೆ ಎಂದು ವರದಿಯಾಗಿದೆ.
ಇಲ್ಲಿಯವರೆಗೂ 40ಕ್ಕೂ ಅಧಿಕ ಮಂದಿ ಸಾವು ಕಂಡಿದ್ದಾರೆ ಎನ್ನಲಾಗಿದೆ. ಭಾರಿ ಮಳೆ, ಭೂಕುಸಿತದ ಬೆನ್ನಲ್ಲಿಯೇ ಸಂಭವಿಸಿದ ಪ್ರವಾಹದಲ್ಲಿ ಶವಗಳು ವಯನಾಡ್ ಜಿಲ್ಲೆಯ ಗಲ್ಲಿಗಲ್ಲಿಗಳಿಗೆ ತೇಲಿಬಂದಿವೆ ಎನ್ನಲಾಗಿದೆ. ನಿಲಂಬೂರಿನ ಪೋತುಕಲ್ ಪ್ರದೇಶದ ನದಿಯಲ್ಲಿ 19 ಮಂದಿಯ ಶವಗಳು ವಿವಿಧೆಡೆ ಕೊಚ್ಚಿ ಹೋಗಿವೆ. ಬೆಳಗಿನ ಜಾವ ಹಲವೆಡೆ ಇತರ ದೇಹಗಳು ಹಾಗೂ ದೇಹದ ಭಾಗಗಳು ತೇಲುತ್ತಿವೆ ಎಂದು ವರದಿಯಾಗಿದೆ. ಒಂದು ಮಗು ಸೇರಿದಂತೆ ಆರು ಮಂದಿಯ ಮೃತದೇಹಗಳು ಮುಂಜಾನೆ ಪತ್ತೆಯಾಗಿವೆ. ಭೂಕುಸಿತದಿಂದ ವಯನಾಡ್‌ನ ಬಹುತೇಕ ಗ್ರಾಮಗಳು ಕೊಚ್ಚಿ ಹೋಗಿದೆ ಎಂಬುದು ಇದರಿಂದ ಗೊತ್ತಾಗಿದೆ. ಪೋತುಕಲ್ ವಯನಾಡಿನ ಗಡಿ ಪ್ರದೇಶವಾಗಿದ್ದು, ಚಾಲಿಯಾರ್ ಅರಣ್ಯದ ಮೂಲಕ ಬಂದ ಬಲವಾದ ಪ್ರವಾಹದಲ್ಲಿ ಮೃತದೇಹಗಳು ಜನನಿಬಿಡ ಪ್ರದೇಶವನ್ನು ತಲುಪಿವೆ ಎಂದು ಶಂಕಿಸಲಾಗಿದೆ.