ಕಡಬ: ರಬ್ಬರ್ ನಿಗಮದ ಕಾರ್ಮಿಕರಿಗೆ ಅನ್ಯಾಯದ ಆರೋಪ – ದಿಢೀರ್ ಪ್ರತಿಭಟನಾ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಎ.15. ರಾಜ್ಯ ರಬ್ಬರ್ ನಿಗಮದ ಸುಬ್ರಹ್ಮಣ್ಯ ವಿಭಾಗದ ಕಾರ್ಮಿಕರಿಗೆ ಅನ್ಯಾಯದ ಆರೋಪದ ಹಿನ್ನೆಲೆಯಲ್ಲಿ ಕಾರ್ಮಿಕರು ಕರ್ತವ್ಯ ಮುಗಿದ ಕೂಡಲೇ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಮರ್ಧಾಳ ಸಮೀಪದ ಕಲ್ಲಾಜೆ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.

ರಬ್ಬರ್ ನಿಗಮದ ಕಾನೂನಿನಂತೆ ಜವಾಬ್ದಾರಿ ವಹಿಸಿಕೊಟ್ಟ ರಬ್ಬರ್ ತೋಟಗಳ ಕಾರ್ಮಿಕರಿಗೆ ಹಾಲು ಕಡಿಮೆ ಬಂದಲ್ಲಿ ಪ್ರತೀ ಕೆಜಿಗೆ ಸಂಬಳದಲ್ಲಿ ಕಡಿತ ಮಾಡುವುದಾಗಿತ್ತು. ಆದರೆ ಇದೀಗ ಹಾಲು ಕಡಿಮೆ ಇರುವ ಪ್ರದೇಶದಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುವುದನ್ನು ಸ್ಥಗಿತಗೊಳಿಸಿ ಅಲ್ಲಿನ ಖಾಯಂ‌ ನೌಕರರನ್ನು ವಿಭಾಗದ ಬೇರೆ ಬೇರೆ ಸ್ಥಳಗಳಲ್ಲಿ ಕಳೆದ ಹತ್ತು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಬದಲಿಗೆ ವರ್ಗಾಯಿಸಲಾಗಿ ಮೇಲಾಧಿಕಾರಿಗಳು ಮೌಖಿಕ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಅದರಂತೆ ಸೋಮವಾರದಂದು ಬೆಳಿಗ್ಗೆ ಖಾಯಂ ಕಾರ್ಮಿಕರನ್ನು ವರ್ಗಾವಣೆ ಮಾಡಲಾಗಿದ್ದು, ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆಯುವಂತೆ ತಿಳಿಸಲಾಗಿತ್ತು ಎಂದು ತಿಳಿದುಬಂದಿದೆ. ಆದರೆ ಖಾಯಂ‌ ಕಾರ್ಮಿಕರು ಎಂದಿನಂತೆ ಇಂದು ಕೂಡಾ ಟ್ಯಾಪಿಂಗ್ ಮಾಡಿದ್ದು, ಸಂಗ್ರಹಿಸಿದ ಹಾಲನ್ನು ಅಕ್ರಮ‌ ಶೇಖರಣೆ ಎಂದು ಅಧಿಕಾರಿಗಳು ನಿಗಮಕ್ಕೆ ವರದಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಆಕ್ರೋಶಗೊಂಡ ಕಾರ್ಮಿಕರು ಸಂಜೆ ವೇಳೆಗೆ ದಿಢೀರ್ ಪ್ರತಿಭಟನಾ ಸಭೆ ನಡೆಸಿದ್ದು, ಎಂದಿನಂತೆ ಕರ್ತವ್ಯಕ್ಕೆ ಹಾಜರಾಗುವುದಾಗಿ ತೀರ್ಮಾನ ಕೈಗೊಂಡಿದ್ದಾರೆ. ನೀತಿ ಸಂಹಿತೆಯ ಮಧ್ಯೆ ಅಧಿಕಾರಿಗಳು ಕಿರುಕುಳ‌ ನೀಡಿದ್ದಲ್ಲಿ ಕಾರ್ಮಿಕ ಸಂಘಟನೆಗಳು ಮುಂದಿನ ಹಂತದಲ್ಲಿ ಉಗ್ರ ಹೋರಾಟದ ಹಾದಿ ಹಿಡಿಯುವುದಾಗಿ ನಿಗಮವನ್ನು ಎಚ್ಚರಿಸಿದೆ.

Also Read  ವಿಶ್ವವಿದ್ಯಾನಿಲಯ ಕಾಲೇಜಿನ ಪರಿಸರ ಸಂಘ ಮತ್ತು ಇನೋವೇಶನ್ ಕ್ಲಬ್ ಉದ್ಘಾಟನೆ

ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮಾತನಾಡಿ, ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದು, ಚುನಾವಣೆ ಮುಗಿದ ನಂತರ ಕಾರ್ಮಿಕರ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರುವುದಾಗಿ ಮನವಿ ಮಾಡಿದ್ದರಿಂದಾಗಿ ಪ್ರತಿಭಟನೆಯನ್ನು ಕೊನೆಗೊಳಿಸಲಾಯಿತು.

Also Read  ಕರ್ನಾಟಕದಲ್ಲಿ ಲಾಕ್​ಡೌನ್ ವಿಸ್ತರಣೆ ಕುರಿತು ಸಿಎಂ ಮಹತ್ವದ ಸಭೆ.?!

ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಚಂದ್ರಲಿಂಗಂ, ರಾಮಸ್ವಾಮಿ‌ ಅನಂದ, ಜೀವರತ್ನಂ, ಪ್ರಮುಖರಾದ ಶಿವ ಕೊಂಬಾರು, ಸೆಲ್ವಕುಮಾರ್, ರಾಜಕೃಷ್ಣ, ಸುಂದರಂ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top