(ನ್ಯೂಸ್ ಕಡಬ) newskadaba.com ವಿಶೇಷ ಲೇಖನ: ಕರುಳು ಕಿರಿಕಿರಿ ಖಾಯಿಲೆ ದೊಡ್ಡ ಕರುಳನ್ನು ಭಾಧಿಸುವ ಬಹಳ ಕಿರಿಕಿರಿ ಉಂಟುಮಾಡುವ ಮತ್ತು ಮಾನಸಿಕವಾಗಿ ವ್ಯಕ್ತಿಗೆ ಹೆಚ್ಚು ಕಿರುಕುಳ ನೀಡುವ ಖಾಯಿಲೆಯಾಗಿದ್ದು, ಆಂಗ್ಲಭಾಷೆಯಲ್ಲಿ ‘ಇರಿಟೇಬಲ್ ಬೋವೆಲ್ ಸಿಂಡ್ರೋಮ್’ ಎಂದು ಕರೆಯುತ್ತಾರೆ. ಕ್ರಿಯಾತ್ಮಕವಾಗಿ ಕರುಳಿನ ಒಳಭಾಗದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲದಿದ್ದರೂ ಈ ರೋಗದಿಂದ ಬಳಲುತ್ತಿರುವವರು ಸಾಮಾನ್ಯವಾಗಿ ಮಾನಸಿಕವಾಗಿ ಕುಗ್ಗಿರುತ್ತಾರೆ. ಆತಂಕ, ಒತ್ತಡ, ಖಿನ್ನತೆ, ಮುಂತಾದ ಮಾನಸಿಕ ಲಕ್ಷಣಗಳು ಈ ರೋಗಿಗಳಲ್ಲಿ ಹೆಚ್ಚು ಕಂಡುಬರುತ್ತದೆ. ಇಂತಹ ರೋಗಿಗಳ ಮನಸ್ಸಿಗೆ ಮಾನಸಿಕ ನೆಮ್ಮದಿ ಇರುವುದಿಲ್ಲ ತಮಗೇನು ದೊಡ್ಡದಾದ ಖಾಯಿಲೆ ಇದೆ ಎಂಬ ಬ್ರಾಂತಿಯಿಂದ ಬಳಲುತ್ತಾರೆ. ತಾವು ಬಹಳ ತೀವ್ರವಾದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದೇನೆ ಎಂಬ ಬ್ರಾಂತಿ ಇವರಿಗೆ ಯಾವತ್ತು ಕಾಡುತ್ತಿರುತ್ತದೆ.
ರೋಗದ ಲಕ್ಷಣಗಳು ಏನು?
1. ಹೊಟ್ಟೆಯಲ್ಲಿ ನೋವು, ಹೊಟ್ಟೆಯಲ್ಲಿ ಸ್ನಾಯು ಸೆಳೆತ ಅಥವಾ ಹೊಟ್ಟೆಯಲ್ಲಿ ಗಾಳಿ ತುಂಬಿದಂತೆ ಅನಿಸುತ್ತದೆ. ಈ ಲಕ್ಷಣಗಳು ಮಲವನ್ನು ವಿಸರ್ಜಿಸಿದ ಬಳಿಕ ಸರಿಯಾಗುತ್ತದೆ. ಪದೇ ಪದೇ ಮಲವಿಸರ್ಜಿಸಬೇಕೆಂಬ ತುಡಿತ ಇವರಲ್ಲಿ ಹೆಚ್ಚು ಕಂಡು ಬರುತ್ತದೆ.
2. ಮಲಬದ್ದತೆ ಅಥವಾ ಅತಿಸಾರ ಬೇಧಿ ಇವರಲ್ಲಿ ಕಂಡು ಬರುತ್ತದೆ.
3. ಹೊಟ್ಟೆಯಲ್ಲಿ ಅತಿಯಾದ ಗಾಳಿ ತುಂಬಿದ ಅನುಭವ
4. ಮಲವಿಸರ್ಜಿಸುವಾಗ ರಕ್ತಮಿಶ್ರಿತವಾಗಿರುತ್ತದೆ.
ಎಲ್ಲ ವಯಸ್ಸಿನವರಲ್ಲಿ ಈ ಕಿರಿಕಿರಿ ಖಾಯಿಲೆ ಕಾಣಬಹುದು. ಸಾಮಾನ್ಯ ಮನುಷ್ಯರಿಗೆ ಈ ಖಾಯಿಲೆ ಬರುವುದಿಲ್ಲ. ಮನಸ್ಸಿಗೆ ನೆಮ್ಮದಿ ಇಲ್ಲದ ವ್ಯಕ್ತಿಗೆ ಈ ಖಾಯಿಲೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಗಂಡು ಹೆಣ್ಣೆಂಬ ಬೇಧವಿಲ್ಲದೆ ಸಾಮಾನ್ಯವಾಗಿ ಮದ್ಯವಯಸ್ಸಿನವರಲ್ಲಿ ಹೆಚ್ಚು ಕಂಡುಬರುತ್ತದೆ.
ಕಾರಣಗಳು ಏನು?
ಯಾವುದೇ ನಿರ್ದಿಷ್ಟ ಕಾರಣಗಳು ಈ ಕಿರಿಕಿರಿ ಕರುಳು ಖಾಯಿಲೆಗೆ ಇಲ್ಲ. ಆದರೆ ಸಣ್ಣ ಕರುಳಿನಲ್ಲಿ ಉಂಟಾದ ಸೋಂಕು ಸಣ್ಣ ಕರುಳಿನಲ್ಲಿ ಬ್ಯಾಕ್ಟೀರಿಯಗಳ ಅತಿಯಾದ ಹೆಚ್ಚಳ, ವಂಶವಾಹಕ ಕಾರಣಗಳು, ಆಹಾರದಲ್ಲಿನ ವ್ಯತ್ಯಾಸ, ವಿಪರೀತ ಒತ್ತಡದ ಜೀವನ, ಕೆಲಸದ ವಾತಾವರಣದಲ್ಲಿನ ವ್ಯಾವಹಾರಿಕವಾದ ಒತ್ತಡಗಳು, ಖಿನ್ನತೆ, ಇವೆಲ್ಲವೂ ಒಟ್ಟು ಸೇರಿ ಈ ಕರುಳು ಕಿರಿಕಿರಿ ಖಾಯಿಲೆಗೆ ಮುನ್ನಡಿ ಬರೆಯುತ್ತದೆ. ಆದರೆ ಕೆಲವೊಂದು ಕಾರಣಗಳಾದ ಆಹಾರ, ಮಾನಸಿಕ ಒತ್ತಡ ರಸದೂತಗಳ ಏರುಪೇರು ಈ ಕಿರಿಕಿರಿ ರೋಗದ ತೀವ್ರತೆಯನ್ನು ಹೆಚ್ಚುಸುತ್ತದೆ.
1) ಆಹಾರ:- ಕೆಲವೊಂದು ಆಹಾರದಲ್ಲಿನ ನ್ಯೂನತೆ ಅಥವಾ ಅಲರ್ಜಿಯಿಂದ ಈ ರೋಗ ಬರುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಪರಿಪೂರ್ಣ ಮಾಹಿತಿ ಇನೂ ಲಭಿಸಿಲ್ಲ. ಆದರೆ ಕೆಲವೊಂದು ನಿರ್ದಿüಷ್ಟ ದ್ವಿದಳ ಧಾನ್ಯ, ಕ್ಯಾಬೇಜ್, ಹಾಲು ಮತ್ತು ಇಂಗಾಲಯುಕ್ತ ಕೃತಕ ಪೇಯ ಸೇವಿಸಿದ ಕೂಡಲೇ ಈ ಕರುಳು ಕಿರಿಕಿರಿ ಖಾಯಿಲೆ ಕೆರಳುತ್ತದೆ.
2) ಮಾನಸಿಕ ಒತ್ತಡ: ಮಾನಸಿಕ ಒತ್ತಡ ಇರುವವರಿಗೆಲ್ಲ ಈ ಕಿರಿಕಿರಿ ಖಾಯಿಲೆ ಬರಬೇಕೆಂದಿಲ್ಲ ಆದರೆ ಈ ರೋಗದಿಂದ ಬಳಲುತ್ತಿರುವವರಿಗೆ ಮಾನಸಿಕ ಒತ್ತಡ, ಜಾಸ್ತಿಯಾದಾಗ ರೋಗ ಮತ್ತಷ್ಟು ಕೆರಳಿ, ತೀವ್ರತೆಯನ್ನು ಪಡೆಯುತ್ತದೆ. ಕೆಲಸದಲ್ಲಿನ ಒತ್ತಡ, ಕೌಟುಂಬಿಕ ಕಲಹಗಳು, ವೈಯಕ್ತಿಕ ತೊಂದರೆಗಳಿಂದಲೂ ಈ ಖಾಯಿಲೆ ಕೆರಳುವ ಸಾಧ್ಯತೆ ಹೆಚ್ಚಿರುತ್ತದೆ.
3) ರಸದೂತಗಳ ಏರುಪೇರು: – ಮಹಿಳೆಯರಲ್ಲಿ ಈ ಕರುಳು ಕಿರಿಕಿರಿ ಖಾಯಿಲೆ ಹೆಚ್ಚು ಕಂಡುಬರುತ್ತದೆ. ಸಾಮಾನ್ಯವಾಗಿ ಖುತುಚಕ್ರದ ಸಮಯದಲ್ಲಿ ರಸದೂತಗಳ ಏರುವಿಕೆಯಿಂದ ಈ ರೋಗ ತಮ್ಮ ತೀವ್ರತೆಯನ್ನು ಪಡೆದುಕೊಂಡು, ಮಹಿಳೆಯನ್ನು ಮತ್ತಷ್ಟು ಕಾಡುತ್ತದೆ. ರಸದೂತಗಳು ಮಾನಸಿಕ ಒತ್ತಡವನ್ನು ಹೆಚ್ಚಿ ಪರೋಕ್ಷವಾಗಿಯೂ ಈ ರೋಗಕ್ಕೆ ಕಿಚ್ಚು ಹಚ್ಚುತ್ತದೆ.
ರೋಗದ ನಿರ್ವಹಣೆ ಹೇಗೆ:-
1) ಕರುಳು ಕಿರಿಕಿರಿ ಖಾಯಿಲೆ ಧೀರ್ಘಕಾಲಿಕ ಖಾಯಿಲೆಯಾಗಿದ್ದು, ಕೆಲವೊಮ್ಮೆ ಹೆಚ್ಚಾಗುತ್ತದೆ ಮತ್ತು ಮಗದೊಮ್ಮೆ ಕಡಿಮೆಯಾಗುತ್ತದೆ. ಒತ್ತಡದ ಸಂದರ್ಭಗಳಲ್ಲಿ ಮತ್ತಷ್ಟು ಕೆರಳುತ್ತದೆ. ಮಾನಸಿಕ ಒತ್ತಡವನ್ನು ಸರಿಯಾಗಿ ನಿಭಾಯಿಸಿದಲ್ಲಿ ಈ ಕಿರಿಕಿರಿ ಖಾಯಿಲೆಯನ್ನು ಸರಿಯಾಗಿ ನಿಯಂತ್ರಿಸಬಹುದು. ಯೋಗ, ಧ್ಯಾನ, ಪ್ರಾಣಾಯಾಮ, ಸತ್ಸಂಗದಿಂದ ಮಾನಸಿಕ ನೆಮ್ಮದಿ ಕಂಡುಕೊಳ್ಳಬಹುದು. ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವರು ಔಷಧಿ ಮುಖಾಂತರ ಖಿನ್ನತೆಯನ್ನು ಕಡಿಮೆ ಮಾಡಿಕೊಂಡಾಗ ಈ ಕರುಳು ಕಿರಿಕಿರಿ ಖಾಯಿಲೆ ತನ್ನಿಂತಾನೇ ಕಡಿಮೆಯಾಗುತ್ತದೆ. ಸೂಕ್ತ ಮಾನಸಿಕ ತಜ್ಞರೊಂದಿಗೆ ಸಮಾಲೋಚನೆ ಮತ್ತು ಆಪ್ತ ಸಂದರ್ಶನದಿಂದ ಮಾನಸಿಕ ನೆಮ್ಮದಿ ದೊರೆತು ಕರುಳಿನ ಸ್ನಾಯುಗಳ ಚಲನೆ ಹತೋಟಿಗೆ ಬಂದು ಮಲಬದ್ದತೆ ಮತ್ತು ಬೇಧಿಯಿಂದ ಮುಕ್ತಿ ಪಡೆಯಬಹುದು.
2) ಅತಿಯಾದ ಗ್ಯಾಸ್ಟಿಕ್ ಸಮಸ್ಯೆ ಇದ್ದಲ್ಲಿ, ವೈದ್ಯರ ಸಲಹೆಯಂತೆ ಆಂಟಾಸಿಡ್ ಎಂಬ ಅಸಿಡಿಟಿ ಕಡಿಮೆ ಮಾಡುವ ಔಷಧಿ ಸೇವಿಸಬಹುದು.
3) ಮಲಬದ್ದತೆ ಇದ್ದಲ್ಲಿ ಮಲ ಸರಾಗವಾಗಿ ಹೊರಹೋಗಿಸುವ ಔಷಧಿ ಬಳಸತಕ್ಕದ್ದು. ಅತಿಸಾರ/ಭೇಧಿ ಇದ್ದಲ್ಲಿ ಪ್ರೊಬಯೇಟಿಕ್ ಔಷಧಿ ಬಳಸಿ ಬೇಧಿಯನ್ನು ನಿಯಂತ್ರಿಸಲಾಗುತ್ತದೆ.
4) ಈ ಕರುಳು ಕಿರಿಕಿರಿ ಖಾಯಿಲೆಯಲ್ಲಿ ಮಾನಸಿಕ ಸ್ಥಿತಿಯ ಅಂಶ ಹೆಚ್ಚು ಪರಿಣಾಮ ಬೀರುತ್ತದೆ. ಈ ಕಾರಣದಿಂದ ಇಂತಹ ಆತಂಕ, ಖಿನ್ನತೆಯನ್ನು ಒತ್ತಡದಿಂದ ಬಳಲುತ್ತಿರುವವರಿಗೆ ಮಾನಸಿಕ ತಜ್ಞರ ಆಪ್ತ ಸಮಾಲೋಚನೆ ಅತೀ ಅಗತ್ಯ. ರೋಗಿಯ ಮಾನಸಿಕ ಸ್ಥಿತಿ, ದುಗುಡ ದುಮ್ಮಾನಗಳನ್ನು ವೈದ್ಯರು ಅರಿತುಕೊಂಡು, ಆತನಿಗೆ ಸಮಾಧಾನ ಹೇಳಿ ರೋಗದ ಬಗೆಗಿನ ಆತಂಕವನ್ನು ದೂರ ಮಾಡಿ ಮಾನಸಿಕವಾಗಿ ಹೆಚ್ಚು ಸದೃಡವಾಗುವ ರೀತಿಯಲ್ಲಿ ಆತನನ್ನು ಹುರುದುಂಬಿಸಿದಲ್ಲಿ ರೋಗವನ್ನು ಖಂಡಿತವಾಗಿಯೂ ಪರಿಣಾಮಕಾರಿಯಾಗಿ ನಿಯಂತ್ರಿಸಹುದು.
ಕೊನೆಮಾತು:
ಕರುಳು ಕಿರಿಕಿರಿ ಖಾಯಿಲೆ ಶತಮಾನದ ಹೊಸತಾದ ಬಳುವಳಿಯಾಗಿದ್ದು, ಅತಿಯಾದ ಒತ್ತಡದ ದಾವಂತದ ಸ್ಪರ್ಧಾತ್ಮಕ ಜಗತ್ತಿನ ಕಾರಣದಿಂದ ಮತ್ತು ನಮ್ಮ ಅನಿಯಾಂತ್ರಿಕ ಹಾಗೂ ಅವೈಜ್ಞಾನಿಕ ಆಹಾರ ಪದ್ದತಿಯಿಂದ ಉಂಟಾಗಿದೆ ಎಂದರೂ ತಪ್ಪಾಗಲಾರದು. ನಾವು ಸೇವಿಸಿದ ಆಹಾರ ಆರೋಗ್ಯಕರವಾಗಿರಬೇಕು ಮತ್ತು ಆಹಾರ ನಮ್ಮ ದೇಹಕ್ಕೆ ಪೂರಕವಾಗಿರತಕ್ಕದ್ದು. ಹಾಗೆಯೇ ನಾವು ಸೇವಿಸಿದ ಆಹಾರ ದೇಹಕ್ಕೆ ಪರಿಪೂರ್ಣವಾಗಿ ಸೇರಿಕೊಳ್ಳಲು ನಮ್ಮ ಮಾನಸಿಕ ಸ್ಥಿತಿಯೂ ಉತ್ತಮವಾಗಿರಬೇಕು. ವಿಪರೀತ ಒತ್ತಡ, ಆತಂಕ, ಖಿನ್ನತೆಯಿಂದ ರಸದೂತಗಳು ಏರುಪೇರಾಗಿ ತಿಂದ ಆಹಾರವೇ ವಿಷವಾಗುವ ಸಾಧ್ಯತೆಯೂ ಇದೆ ಮಾನಸಿಕ ನೆಮ್ಮದಿ ಇಲ್ಲದ ಯಾಂತ್ರಿಕ ಬದುಕು, ಭಾವನೆಗಳೇ ಸತ್ತು ಹೋದ ಸಂಬಂಧಗಳು, ವಿಪರೀತ ಒತ್ತಡದ ಕೆಲಸದ ನಡುವೆ ತಯಾರಾಗುವ ದಿಡೀಕ್ ಜಂಕ್ ಆಹಾರಗಳು ಇವೆಲ್ಲವೂ ಮೇಳೈಸಿ ದಿನಕ್ಕೊಂದು ಹೊಸ ಹೊಸ ರೋಗಗಳು ಉದ್ಬವವಾಗುತ್ತದೆ. ಇದಕ್ಕೆ ಸರಿಯಾದ ಉದಾಹರಣೆಯೇ ಈ ಕರುಳು ಕಿರಿಕಿರಿ ಖಾಯಿಲೆ. ನಾವೆಲ್ಲರೂ ಸಕಾಲದಲ್ಲಿ ಎಚ್ಚೆತ್ತುಕೊಂಡು ಒತ್ತಡರಹಿತ ಉಲ್ಲಾಸದಾಯಕ ಕೆಲಸವನ್ನು ಆಯ್ಕೆ ಮಾಡಿ ಆರೋಗ್ಯಪೂರ್ಣ ಆಹಾರ ಸೇವಿಸಿದ್ದು, ಇಂತಹ ಹೊಸ ಹೊಸ ರೋಗಗಳಿಂದ ದೂರವಿರಬಹುದು. ಅದರಲ್ಲಿಯೇ ನಮ್ಮೆಲ್ಲೆ ಹಿತ ಅಡಗಿದೆ.
ಡಾ: ಮುರಲೀ ಮೋಹನ್ ಚೂಂತಾರು
BDS MDS DNB MBA FPFA
MOSRCSEd
Consultant Oral and Maxillofacial Surgeon
9845135787
drmuraleechoontharu@gmail.com
www.surakshadental.com