(ನ್ಯೂಸ್ ಕಡಬ)newskadaba. com ಬೆಂಗಳೂರು, ಆ.30. ಆನ್ ಲೈನ್ ಗೇಮಿಂಗ್ ಆ್ಯಪ್ ಮೂಲಕ ಮಕ್ಕಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಇವುಗಳ ಬಗ್ಗೆ ತನಿಖೆ ಕೈಗೊಂಡು, ಇಂತಹ ಚಟುವಟಿಕೆಗಳನ್ನು ರದ್ದು ಪಡಿಸುವಂತೆ ಕೋರಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಡಿ.ಎಸ್ ಸರ್ಕಾರದ ಗಮನ ಸೆಳೆದರು ಎಂದು ವರದಿಯಾಗಿದೆ.
ಗೃಹ ಸಚಿವರ ಪರವಾಗಿ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಆನ್ ಲೈನ್ ಗೇಮ್ ಗಳಾದ ಡ್ರೀಮ್ 11, ಮೈ ಸರ್ಕಲ್ ಮುಂತಾದ ಆ್ಯಪ್ ಗಳಿಂದ ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಯುವ ಸಮುದಾಯದವರು ಆನ್ ಲೈನ್ ಗೇಮ್ ಆಡುವ ಹವ್ಯಾಸಿಗಳಾಗಿದ್ದು, ಇವರು ತಮ್ಮ ಉದ್ಯೋಗದ ಬಗ್ಗೆ ಹೆಚ್ಚು ಆಸಕ್ತಿಯನ್ನು ವಹಿಸದೆ ದಕ್ಷತೆಯಿಂದ ಕಾರ್ಯ ನಿರ್ವಹಿಸದೇ, ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಆ ಮೂಲಕ ಆರ್ಥಿಕ ನಷ್ಟ ಹೊಂದಿ ಮಾನಸಿಕ ತೊಂದರೆಗೊಳಗಾಗುತ್ತಿರುತ್ತಾರೆ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಅನ್ ಲೈನ್ ಗೇಮ್ ಆಡುವ ಹವ್ಯಾಸಿಗಳಾಗಿದ್ದು ತಮ್ಮ ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಸರ್ಕಾರ ಸೋಷಿಯಲ್ ಮಿಡಿಯಾ, ಮಾಧ್ಯಮಗಳು ಮತ್ತು ಪೊಲೀಸ್ ಇಲಾಖೆಯ ಮೂಲಕ ಸೈಬರ್ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜೊತೆಗೆ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ‘ಸೈಬರ್ ಕ್ರೈಂ ಜಾಗೃತಿ ದಿವಸ’ ಆಚರಣೆ ಮಾಡುತ್ತಿದ್ದು, ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಸೈಬರ್ ಅಪರಾಧ ತಡೆಗಟ್ಟುವ ಕುರಿತು ಜಾಗೃತಿ ಕಾರ್ಯಾಗಾರಗಳನ್ನು ಏರ್ಪಡಿಸಿ ವಂಚನೆಗೆ ಒಳಗಾದಂತೆ ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ ಎನ್ನಲಾಗಿದೆ.