ಇಂದು ಸಿಎಂ ಮಹತ್ವದ ಸಭೆ..! ನಂದಿನಿ ಹಾಲಿನ ದರ ಹೆಚ್ಚಳ ಸಾಧ್ಯತೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.21. ಇಂದು ಸಿಎಂ ಸಿದ್ದರಾಮಯ್ಯ ‘ಕೆಎಂಎಫ್’ ಜೊತೆ ಮಹತ್ವದ ಸಭೆ ನಡೆಸಲಿದ್ದು, ನಂದಿನಿ ಹಾಲಿನ ದರ ಹೆಚ್ಚಳ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಹಾಲಿನ ದರ ಹೆಚ್ಚಳ ಮಾಡುವ ಕುರಿತು ಜು. 14 ರಂದು ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಿಗದಿಯಾಗಿತ್ತು. ಆದರೆ ಸಿಎಂ ಸಿದ್ದರಾಮಯ್ಯಗೆ ಅನಾರೋಗ್ಯವಿದ್ದ ಕಾರಣ ಸಭೆ ಮುಂದೂಡಲಾಗಿತ್ತು. ಆ ಸಭೆ ಇಂದು ನಡೆಯಲಿದೆ ಎಂದು ವರದಿ ತಿಳಿಸಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ನೇತೃತ್ವದಲ್ಲಿ ಹಾಲು ಒಕ್ಕೂಟಗಳ ಪದಾಧಿಕಾರಿಗಳು ಮುಖ್ಯ ಮಂತ್ರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದು, ಸಭೆಯ ನಂತರ ಹಾಲಿನ ದರ ಪ್ರತಿ ಲೀಟರ್ ಗೆ ಹೆಚ್ಚಳದ ಬಗ್ಗೆಯೂ ಅಂತಿಮ ನಿರ್ಧಾರ ಹೊರ ಬೀಳಲಿದೆ. ಹಾಲಿನ ದರ ಪ್ರತಿ ಲೀಟರ್ 5 ರೂ ಹೆಚ್ಚಿಸಬೇಕು ಎಂಬುದು ಒಕ್ಕೂಟಗಳ ಬೇಡಿಕೆಯಾಗಿದೆ. ಹೈನು ರಾಸುಗಳ ನಿರ್ವಹಣಾ ವೆಚ್ಚ, ಪಶು ಆಹಾರಗಳ ಬೆಲೆ ಏರಿಕೆಯಿಂದಾಗಿ ಹಾಲು ಉತ್ಪಾದಕರಿಗೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಾಲಿನ ದರ 5 ರೂ. ಹೆಚ್ಚಿಸಬೇಕು. ಇಲ್ಲದಿದ್ದರೆ ಹಾಲು ಉತ್ಪಾದಕರು ಹಾಗೂ ಹೈನು ಉದ್ಯಮದ ಅಭಿವೃದ್ಧಿಗೆ ತೊಂದರೆ ಆಗಲಿದೆ ಎಂದು ಒಕ್ಕೂಟಗಳು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದರು ಎನ್ನಲಾಗಿದೆ.

error: Content is protected !!

Join the Group

Join WhatsApp Group