(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.13. ಜಾರ್ಖಂಡ್‌ನಿಂದ ಕೂಲಿ ಕೆಲಸಕ್ಕೆ ನಗರಕ್ಕೆ ಕರೆತರಲಾಗಿದ್ದ 12 ಅಪ್ರಾಪ್ತ ಮಕ್ಕಳನ್ನು ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ರಕ್ಷಣೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಉತ್ತಮ ವೇತನ ನೀಡುವುದಾಗಿ ಮನವೊಲಿಸಿದ್ದ ಬಮನ ಪಹಡಿಯಾ ಮತ್ತು ಮೈಸ ಪಹಡಿಯಾ ಎಂಬ ಇಬ್ಬರ ವ್ಯಕ್ತಿಗಳು ತಮ್ಮ ಜೊತೆಗೆ ಉತ್ತರ ಭಾರತದಿಂದ ರೈಲಿನಲ್ಲಿ 14 ಮತ್ತು 15 ವರ್ಷದೊಳಗಿನ 11 ಅಪ್ರಾಪ್ತೆಯರು ಮತ್ತು 17 ವರ್ಷದ ಅಪ್ರಾಪ್ತನನ್ನು ಬೆಂಗಳೂರಿಗೆ ಕರೆ ತಂದಿದ್ದಾರೆ ಎಂದು ತಿಳಿದುಬಂದಿದೆ.
ಹೌರಾ ರೈಲು ನಿಲ್ದಾಣದಿಂದ ಮಕ್ಕಳೊಂದಿಗೆ ರೈಲು ಹತ್ತಿರುವ ಆರೋಪಿಗಳು ನಂತರ ಸ್ವತಃ ಟಿಕೆಟ್ ಖರೀದಿ ಮಾಡುವಂತೆ ತಿಳಿಸಿದ್ದಾರೆ. ಬಳಿಕ ಕೆ.ಆರ್.ಪುರಂ ರೈಲು ನಿಲ್ದಾಣದಲ್ಲಿ ಇಳಿದು ಮರಳಿ ಕೆಎಸ್ಆರ್ ನಿಲ್ದಾಣಕ್ಕೆ ತೆರಳು ರೈಲು ಹತ್ತಿದ್ದಾರೆ. ಕೆಎಸ್ಆರ್ ನಿಲ್ದಾಣದಲ್ಲಿ ಮಕ್ಕಳೊಂದಿಗೆ ಇಳಿದ ಆರೋಪಿಗಳು ಒಂದೆಡೆ ಎಲ್ಲರನ್ನೂ ಕೂಡಿಸಿದ್ದಾರೆ. ಈ ವೇಳೆ ಮಕ್ಕಳೆಲ್ಲರೂ ಅಪ್ರಾಪ್ತರಾಗಿದ್ದ ಕಾರಣ ಸಹಾಯಕ ಸಬ್ ಇನ್ಸ್ ಪೆಕ್ಟರ್ ವಿ.ಭಾಗ್ಯಲಕ್ಷ್ಮಿ, ಮಹಿಳಾ ಕಾನ್ ಸ್ಟೇಬಲ್ ಕೆ.ಎಲ್. ನವ್ಯಾ ಅವರು ಮಕ್ಕಳನ್ನು ವಿಚಾರಿಸಿದ್ದಾರೆ. ಈ ವೇಳೆ ಮಕ್ಕಳು ಒಬ್ಬರಿಗೊಬ್ಬರ ಪರಿಚಯ ಇಲ್ಲದಿರುವುದು, ಕೆಲಸಕ್ಕೆಂದು ಕರೆ ತಂದಿರುವುದು ತಿಳಿದುಬಂದಿದೆ. ಬಳಿಕ ಮಕ್ಕಳನ್ನು ವಶಕ್ಕೆ ಪಡೆದ ಅಧಿಕಾರಿಗಳು, ಅವರನ್ನು ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಮುಂದೆ ಹಾಜರುಪಡಿಸಿದರು. 11 ಅಪ್ರಾಪ್ತ ಬಾಲಕಿಯರನ್ನು ಸರ್ಕಾರಿ ಬಾಲಕಿಯರ ಗೃಹಕ್ಕೆ ಸೇರಿಸಲಾಗಿದ್ದು, ಹುಡುಗನನ್ನು ಬಾಸ್ಕೋ ಮಕ್ಕಳ ಆಶ್ರಯ ಗೃಹಕ್ಕೆ ಸಮಾಲೋಚನೆ ಮತ್ತು ಸಹಾಯಕ್ಕಾಗಿ ರವಾನಿಸಲಾಗಿದೆ. ವಯಸ್ಕರನ್ನು ಸರ್ಕಾರಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದೀಗ ಇಬ್ಬರನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು, ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.