(ನ್ಯೂಸ್ ಕಡಬ) newskadaba.com ಚಾಮರಾಜನಗರ, ಜ.12. ರೈತರ ಜಮೀನುಗಳಿಗೆ ಲಗ್ಗೆಯಿಟ್ಟು ಫಸಲು, ಆಸ್ತಿ-ಪಾಸ್ತಿ ನಷ್ಟ ಮಾಡುತ್ತಿದ್ದ, ಹಾಗೂ ಜನರ ಮೇಲೆಯೇ ದಾಳಿ ಮಾಡಲು ಮುಂದಾಗುತ್ತಿದ್ದ ಪುಂಡಾನೆಯನ್ನು ಸಾಕಾನೆ ಅಭಿಮನ್ಯು ಮತ್ತು ಇತರೆ ಸಾಕಾನೆಗಳ ಸಹಕಾರದೊಂದಿಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯ ವ್ಯಾಪ್ತಿಯ ಕಡೆಕೋಟಿ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಾಕಾನೆಗಳಾದ ಕೂಂಬಿಂಗ್ ಆಪರೇಷನ್ ಸ್ಪೆಷಲಿಸ್ಟ್ಗಳಾದ ಅಭಿಮನ್ಯು, ಮಹೇಂದ್ರ, ಗಣೇಶ ಮತ್ತು ಭೀಮ ಆನೆಗಳನ್ನು ನಿಯೋಜನೆ ಮಾಡಿಕೊಂಡು, ಪಶು ವೈಧ್ಯಾಧಿಕಾರಿ ಡಾ. ಮಿರ್ಜಾ ವಾಸಿಂ, ಡಾ.ರಮೇಶ್ ಹಾಗೂ ಡಾ. ಮುಜೀಬ್ ರೆಹಮಾನ್ ಹಾಗೂ ಸಹಾಯಕರನ್ನು ಬಳಸಿಕೊಂಡು ಆನೆ ಹಿಡಿಯುವ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎನ್ನಲಾಗಿದೆ. ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸತತ ಪರಿಶ್ರಮದ ಫಲವಾಗಿ ಕಾಡಾನೆಗೆ ಅರವಳಿಕೆ ಚುಚ್ಚು ಮದ್ದು ನೀಡುವ ಮೂಲಕ ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ಸೆರೆ ಸಿಕ್ಕ ಪುಂಡಾನೆಯನ್ನು ಬಂಡೀಪುರ ವಿಭಾಗ ವ್ಯಾಪ್ತಿಯ ಐನೂರು ಮಾರಿಗುಡಿ ವಲಯದ ರಾಂಪುರ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಗುತ್ತಿದೆ. ಅಭಿಮನ್ಯು ಪರಾಕ್ರಮದ ಎದುರು ಪುಂಡಾನೆ ಸೋತು ಶರಣಾಗಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.