ಎತ್ತಿನಗಾಡಿ ಓಟದ ಸ್ಪರ್ಧೆ ವೇಳೆ ದುರಂತ ➤ ಚಕ್ರ ಹರಿದು ರೈತ ಮೃತ್ಯು

(ನ್ಯೂಸ್ ಕಡಬ) newskadaba.com ಮಂಡ್ಯ, ಜ. 09.  ಎತ್ತಿನಗಾಡಿ ಓಟದ ಸ್ಪರ್ಧೆ ವೇಳೆ ಪ್ರೇಕ್ಷಕನ ಮೇಲೆ ಗಾಡಿಯ ಚಕ್ರ ಹರಿದ ಪರಿಣಾಮ ಓರ್ವ ರೈತ ಮೃತಪಟ್ಟು, ಮತ್ತೋರ್ವ ಬಾಲಕ ತೀವ್ರವಾಗಿ ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆಯ ಚಿಕ್ಕಮಂಡ್ಯ ಗ್ರಾಮದ ಬಳಿ ನಡೆದಿದೆ.

ಮೃತಪಟ್ಟ ರೈತನನ್ನು ಕೀಲಾರ ಗ್ರಾಮದ ನಾಗರಾಜು (42) ಮತ್ತು ಗಾಯಗೊಂಡ ಬಾಲಕನನ್ನು ಹುಲಿವಾನ ಗ್ರಾಮದ ಋತ್ವಿಕ್ (10) ಎಂದು ಗುರುತಿಸಲಾಗಿದೆ. ಹಳ್ವಿಕೇಶ್ವರ ಬೋರೇಶ್ವರ ಹಾಗೂ ರೈತ ಮಿತ್ರ ಬಳಗದ ವತಿಯಿಂದ ಚಿಕ್ಕಮಂಡ್ಯ ಗ್ರಾಮದ ಬಳಿ 8ನೇ ವರ್ಷದ ಅಂತರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಒಂದು ಕಡೆಯಿಂದ ಪ್ರಾರಂಭವಾದ ಓಟದ ಸ್ಪರ್ಧೆ ಮತ್ತೊಂದು ತುದಿ ತಲುಪಿತ್ತು. ಈ ವೇಳೆ ಅತಿ ವೇಗವಾಗಿ ಬಂದ ಎತ್ತಿನ ಗಾಡಿ ಜನರ ಮೇಲೆರಗಿದ್ದು, ನಾಗರಾಜು ಎಂಬವರಿಗೆ ಎತ್ತಿನ ಗಾಡಿಯು ಢಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಅವರ ಮೇಲೆ ಚಕ್ರ ಹರಿದು ತೀವ್ರವಾಗಿ ಗಾಯಗೊಂಡಿದ್ದರೆ, ಕೆಳಗೆ ಬಿದ್ದ ಋತ್ವಿಕ್ ಎಂಬಾತ ಕಾಲ್ತುಳಿತಕ್ಕೊಳಗಾಗಿ ಗಾಯಗೊಂಡಿದ್ದಾನೆ. ಕೂಡಲೇ ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾರೂ ಚಿಕಿತ್ಸೆ ಫಲಕಾರಿಯಾಗದೆ ನಾಗರಾಜು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಎತ್ತಿನಗಾಡಿ ಓಟದ ಸ್ಪರ್ಧೆ ಆಯೋಜಿಸಿದ್ದ ಮಧು ಹಾಗೂ ಇತರರು ತಾಲೂಕು ಆಡಳಿತ ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು ತಿಳಿದುಬಂದಿದೆ.

Also Read  ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ..!

error: Content is protected !!
Scroll to Top