(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.05. ನಮ್ಮ ಮೆಟ್ರೋ ದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್ ನಗರದ ಎರಡು ಮೆಟ್ರೋ ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ಆಟೋ ಸೇವೆಗಳನ್ನು ಆರಂಭಿಸಿಲಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು ನಗರ ಪೊಲೀಸರ ಸಹಕಾರ ಪಡೆದಿರುವ ಬಿಎಂಆರ್‌ಸಿಎಲ್, ಪ್ರಾಯೋಗಿಕವಾಗಿ ನಾಲ್ಕು ಮೆಟ್ರೋ ನಿಲ್ದಾಣಗಳ ಪೈಕಿ ಮಹಾತ್ಮ ಗಾಂಧಿ (ಎಂ.ಜಿ) ರಸ್ತೆ ಹಾಗೂ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಕೌಂಟರ್ ಸ್ಥಾಪಿಸಿದೆ.
ಈ ಕೌಂಟರ್‌ಗಳನ್ನು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಶೀಘ್ರದಲ್ಲೇ ಇನ್ನೂ ಮೂರು ನಿಲ್ದಾಣಗಳಲ್ಲಿ ಈ ಸೇವೆ ಪ್ರಾರಂಭಿಸಲಾಗುವುದು ಎಂದು ಹೇಳಿದರು. ಪ್ರಿಪೇಯ್ಡ್ ಆಟೋ ಸೇವೆಗಳು ಬೆಳಿಗ್ಗೆ 7 ರಿಂದ ಮರುದಿನ 12.30 ರವರೆಗೆ ಕಾರ್ಯನಿರ್ವಹಿಸುತ್ತವೆ. ಪ್ರಸ್ತುತ ಸರ್ಕಾರದ ಆದೇಶದ ಪ್ರಕಾರ ಪ್ರಯಾಣ ದರವು ಮೊದಲ 2 ಕಿಮೀಗೆ ಕನಿಷ್ಠ 30 ರೂ ಮತ್ತು ನಂತರ ಪ್ರತಿ ಕಿಮೀಗೆ 15 ರೂ ಇರಲಿದೆ. ರಾತ್ರಿ 10 ರಿಂದ ಬೆಳಗ್ಗೆ 5 ರವರೆಗಿನ ದರಗಳು ಸಾಮಾನ್ಯ ದರಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಶೀಘ್ರದಲ್ಲೇ ಬನಶಂಕರಿ, ಬೈಯಪ್ಪನಹಳ್ಳಿ ಮತ್ತು ನಾಗಸಂದ್ರ ನಿಲ್ದಾಣಗಳಿಗೆ ಈ ಸೌಲಭ್ಯವನ್ನು ವಿಸ್ತರಿಸುವ ಕುರಿತು ಚಿಂತನೆಗಳು ನಡೆದಿದೆ ಎಂದರು. ಎಂಜಿ ರಸ್ತೆ ನಿಲ್ದಾಣದಲ್ಲಿ ಕಬ್ಬಿನ ಜ್ಯೂಸ್ ಜಾಯಿಂಟ್ ಅನ್ನು ಕೂಡ ತೆರೆಯಲಾಗಿದ್ದು, ನಾಡಪ್ರಭು ಕೆಂಪೇಗೌಡ, ನಾಗಸಂದ್ರ, ಸರ್ ಎಂ ವಿಶ್ವೇಶರಾಯ ಮತ್ತು ಚಿಕ್ಕಪೇಟೆ ಮೆಟ್ರೋ ನಿಲ್ದಾಣಗಳಲ್ಲಿ ನಾಲ್ಕು ಕಬ್ಬಿನ ಜ್ಯೂಸ್ ಜಾಯಿಂಟ್ ಅನ್ನು ತೆರೆಯುವ ಕುರಿತು ಚಿಂತನೆಗಳು ನಡೆದಿವೆ ಎಂದು ತಿಳಿದುಬಂದಿದೆ.