(ನ್ಯೂಸ್ ಕಡಬ) newskadaba.com ಮಂಡ್ಯ, ಜ.05. ಚಿರತೆಯೊಂದು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿ ಬಿದ್ದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಸಬ್ಬನಕುಪ್ಪೆ ಗ್ರಾಮದ ದಲ್ಲಿ ವರದಿಯಾಗಿದೆ.
ಸಬ್ಬನಕುಪ್ಪೆ ವ್ಯಾಪ್ತಿಯಲ್ಲಿ ಚಿರತೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ಇದರಿಂದಾಗಿ ಭೀತಿಗೊಂಡ ಜನರು ಚಿರತೆ ಸೆರೆಗೆ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದರು. ಅದರಂತೆ ಸಬ್ಬನಕುಪ್ಪೆ ನಿವಾಸಿ ಬಾಲು ಎಂಬುವವರ ತೋಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇರಿಸಿದ್ದ ಬೋನಿಗೆ ಇಂದು ಬೆಳಿಗ್ಗೆ ಆಹಾರ ಅರಸಿಕೊಂಡು ಜಮೀನಿಗೆ ಬಂದ ಚಿರತೆ ಬೋನಿನೊಳಗಿದ್ದ ಆಹಾರ ತಿನ್ನಲು ಹೋಗಿ ಸೆರೆಯಾಗಿದೆ. ಚಿರತೆ ಬೋನಿಗೆ ಬಿದ್ದ ಮಾಹಿತಿ ತಿಳಿಯುತ್ತಿದ್ದಂತೆ ನಿಟ್ಟುಸಿರು ಬಿಟ್ಟ ಸಬ್ಬನಕುಪ್ಪೆ ಗ್ರಾಮದ ಜನರು ಚಿರತೆ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಇನ್ನೊಂದೆಡೆ ಚಿರತೆ ಬೋನಿಗೆ ಬಿದ್ದ ಮಾಹಿತಿ ತಿಳಿದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಸೆರೆಯಾದ ಚಿರತೆಯನ್ನ ದೂರದ ಅರಣ್ಯಕ್ಕೆ ಬಿಡಲು ನಿರ್ಧಾರಿಸಿದ್ದಾರೆ ಎನ್ನಲಾಗಿದೆ.