(ನ್ಯೂಸ್ ಕಡಬ) newskadaba.com ಉಳ್ಳಾಲ, ಡಿ. 24. ವಿದೇಶಿ ವಿದ್ಯಾರ್ಥಿಗಳಿದ್ದ ಸ್ಕೂಟರ್ ಗೆ ಢಿಕ್ಕಿ ಹೊಡೆದು ಕಾರಿನಲ್ಲಿ ಪರಾರಿಯಾಗಲೆತ್ನಿಸಿದ ಚಾಲಕನನ್ನು ತಡೆದ ಸ್ಥಳೀಯರು, ಪೊಲೀಸರಿಗೆ ಒಪ್ಪಿಸಿದ ಘಟನೆ ತಲಪಾಡಿ ದೇವಿನಗರ ಎಂಬಲ್ಲಿ ವರದಿಯಾಗಿದೆ.
ಬಂಧಿತರನ್ನು ಕೇರಳದ ಅಹಮ್ಮದ್ ಮುಬಾರಿಷ್ ಎ.ಕೆ ಎಂದು ಗುರುತಿಸಲಾಗಿದೆ. ಗಾಯಾಗೊಂಡವರನ್ನು ಸವಾರ ಸೆಟಿದ್ ಬಾಷಾಂಗ್(30) ಹಾಗೂ ಸಹ ಸವಾರ ಅಲಿ ಸಾಗರ್(30) ಎಂದು ಗುರುತಿಸಲಾಗಿದೆ. ಅಹಮ್ಮದ್ ಮುಬಾರಿಷ್ ಕಾರಿನಲ್ಲಿ ಮಂಗಳೂರಿನಿಂದ ಕೇರಳದ ಕಡೆಗೆ ಅತಿ ವೇಗದಿಂದ ಧಾವಿಸಿ ರಾ.ಹೆ. 66 ರ ಕೋಟೆಕಾರು ಹೆದ್ದಾರಿಯಲ್ಲಿ ಸ್ಕೂಟರ್ ಗೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ ವಿದೇಶಿಯರು ಚಲಾಯಿಸುತ್ತಿದ್ದ ಸ್ಕೂಟರ್ ರಸ್ತೆಗಪ್ಪಳಿಸಿದೆ. ವಿದೇಶಿಗರಾಗಿರುವ ಸ್ಕೂಟರ್ ಸವಾರ ಹಾಗೂ ಸಹ ಸವಾರ ಮಂಗಳೂರು ವಿ.ವಿಯಲ್ಲಿ ವ್ಯಾಸಂಗಕ್ಕೆಂದು ಬಂದಿದ್ದರು ಎನ್ನಲಾಗಿದೆ. ಕಾರು ಚಾಲಕ ಢಿಕ್ಕಿ ಹೊಡೆದ ಬಳಿಕ ದೇವಿಪುರದ ಒಳ ರಸ್ತೆಯಿಂದ ಪರಾರಿಯಾಗಲು ಯತ್ನಿಸಿದ್ದ, ಆತನನ್ನ ಬೆನ್ನಟ್ಟಿದ ಸಾರ್ವಜನಿಕರು ದೇವಿಪುರ ಮಂಡೆ ಕಟ್ಟ ಎಂಬಲ್ಲಿ ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.