(ನ್ಯೂಸ್ ಕಡಬ) newskadaba.com ಬೆಂಗಳೂರು , ಡಿ 23 : ಸಮಗ್ರ ಕೃಷಿ ಪದ್ಧತಿಯಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ರೈತರು ತಮ್ಮ ಆದಾಯವನ್ನು ದುಪ್ಪಟ್ಟು ಅಲ್ಲ ಹತ್ತು ಪಟ್ಟು ವೃದ್ಧಿಸಿಕೊಳ್ಳಬಹುದು. ಅದರಲ್ಲೂ ಸಾವಯವ ಪದ್ಧತಿಯಲ್ಲಿ ಬೆಳೆದ ಬೆಳೆಗಳಿಗೆ ನಾಡಿನಾಚೆಗೂ ಮಾರುಕಟ್ಟೆ ಇರುವುದರಿಂದ ಜಮೀನಿಗೆ ಹಾಕಿದ ಬಂಡಾವಳ ಕೆಲವೇ ವರ್ಷಗಳಲ್ಲಿ ದುಪ್ಪಟ್ಟು ಮೊತ್ತ ಕೈ ಸೇರುವುದು ಖಚಿತ ಎಂದಿದ್ದಾರೆ.
ಅನನ್ಯ ಪ್ರೀತಿ, ಶ್ರದ್ಧೆ, ಪರಿಶ್ರಮದಿಂದಾಗಿ ಬಂಗಾರದ ಬೆಳೆ ಬೆಳೆಯುತ್ತಿರುವ ತುಮಕೂರು ಜಿಲ್ಲೆಯ ಮಷಣಾಪುರ ಪ್ರಗತಿಪರ ರೈತ ಎಂ. ಎಸ್ .ಮೃತ್ಯುಂಜಯ ಅವರು ಇಂತಹ ಮಾತುಗಳನ್ನು ನಿಜವಾಗಿಸುವ ಸಾಧನೆ ಮಾಡಿದ್ದಾರೆ. ತಮ್ಮ ಜಮೀನನ್ನೇ ಕರ್ಮಭೂಮಿಯನ್ನಾಗಿಸಿಕೊಂಡು ಇವರು ತೋಟದ ಮನೆಯಲ್ಲೇ ವಾಸವಿದ್ದಾರೆ. ಇಡೀ ದಿನ ಗಿಡಗಳ ಆರೈಕೆಗೆ ಅಧಿಕ ಸಮಯ ಮೀಸಲಿಡುತ್ತಾರೆ. ದೂರದ ಪ್ರದೇಶಗಳಿಂದ ತಂದು ನೆಟ್ಟಿರುವ ಗಿಡಗಳಿಗೆ ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ.ಕೃಷಿ ತಜ್ಞರು ನೀಡುವ ಸಲಹೆಗಳನ್ನು ಪಾಲಿಸುವ ಜತೆಗೆ ಸರ್ಕಾರದ ವಿವಿಧ ಸಬ್ಸಿಡಿ ಕಾರ್ಯಕ್ರಮಗಳ ಪ್ರಯೋಜನ ಪಡೆದು ಕೃಷಿ ಮುಂದುವರಿಸಿದ್ದಾರೆ. ತೋಟದಲ್ಲೇ ಬೆಳೆಸಿದ ಗಿಡಗಳಿಂದ ಕಸಿ ಮಾಡಿ ಮಾರಾಟ ಮಾಡಲು ನರ್ಸರಿ ಆರಂಭಿಸಿದ್ದಾರೆ. ಜೇನುಕೃಷಿ, ನಾಯಿಮರಿ ಸಾಕಣೆ, ಅಲಂಕಾರಿಕ ಪಕ್ಷಿಗಳನ್ನು ಸಾಕಿ ಅದರಿಂದಲೂ ಆದಾಯದ ಮಾರ್ಗ ಕಂಡುಕೊಂಡಿದ್ದಾರೆ. ಇವರ ತೋಟದ ವೈಶಿಷ್ಟ್ಯವೆಂದರೆ ಅಡಿಗಡಿಗೂ ವೈವಿಧ್ಯಮಯ ಗಿಡಗಳು ಸೊಂಪಾಗಿ ಬೆಳೆದು ಅರಣ್ಯ ಹೊಕ್ಕಿ ಬಂದ ಅನುಭವ ನೀಡುತ್ತದೆ ಎಂದು ತಿಳಿದು ಬಂದಿದೆ.