(ನ್ಯೂಸ್ ಕಡಬ) newskadaba.com ಬೆಂಗಳೂರು ನ.07:ವಿಶ್ವದ ಅತ್ಯಂತ ಸಿರಿವಂತ ದೇವರು ತಿರುಪತಿ ವೆಂಕಟೇಶ್ವರ ಈಗ 2.26 ಲಕ್ಷ ಕೋಟಿ ಒಡೆಯ. ಚರಾಸ್ತಿ ಮತ್ತು ಸ್ಥಿರಾಸ್ತಿಯ ಬಗ್ಗೆ ಶ್ವೇತಪತ್ರ ಹೊರಡಿಸಲಾಗಿದೆ. ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಒಟ್ಟು 10.3 ಟನ್‌ನಷ್ಟು ಚಿನ್ನದ ಠೇವಣಿ ಇದೆ. ಇದರ ಒಟ್ಟು ಮೌಲ್ಯ 5,300 ಕೋಟಿ ರೂ. ಸುಮಾರು 15,938 ಕೋಟಿಯಷ್ಟು ನಗದು ಠೇವಣಿ ಇದೆ. ದೇಶಾದ್ಯಂತ 960 ಕಡೆ 7,123 ಎಕರೆ ಭೂಮಿ ಟ್ರಸ್ಟ್ ಹೆಸರಿನಲ್ಲಿದೆ ಎಂದು ಶ್ವೇತಪತ್ರದಲ್ಲಿ ಮಾಹಿತಿ ನೀಡಲಾಗಿದೆ.
ಭೂಮಿಯ ಒಟ್ಟು ಮಾರುಕಟ್ಟೆ ಮೌಲ್ಯ 2 ಲಕ್ಷ ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ. 2019ರಲ್ಲಿ 13,025 ಕೋಟಿ ರೂ. ಇದ್ದ ನಿಶ್ಚಿತ ಠೇವಣಿ ಈಗ 15,938 ಕೋಟಿಗೆ ಏರಿಕೆಯಾಗಿದೆ. ಕೇವಲ ಮೂರು ವರ್ಷಗಳಲ್ಲಿ ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ 2,900 ಕೋಟಿ ಹೆಚ್ಚಳವಾಗಿದೆ. 2019ರಲ್ಲಿ 7.3ರ ಟನ್‌ನಷ್ಟಿದ್ದ ಬಂಗಾರದ ದಾಸ್ತಾನು 2020ರ ವೇಳೆಗೆ 2.9 ಟನ್‌ನಷ್ಟು ಏರಿಕೆಯಾಗಿ ಒಟ್ಟು 10.3 ಟನ್‌ನಷ್ಟಿದೆ ಎಂದು ಟಿಟಿಡಿ ಹೇಳಿಕೊಂಡಿದೆ.