(ನ್ಯೂಸ್ ಕಡಬ) newskadaba.com ನ.07: ಈ ವರ್ಷದ ಎರಡನೇ ಹಾಗೂ ಕೊನೆಯ ಚಂದ್ರಗ್ರಹಣ ನವೆಂಬರ್ 8ಕ್ಕೆ ಅಂದರೆ ನಾಳೆ ಸಂಭವಿಸುತ್ತಿದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿದೆ. ದೇಶದ ಹಲವು ಪ್ರದೇಶಗಳಲ್ಲಿ ಚಂದ್ರಗ್ರಹಣ ಗೋಚರಿಸಲಿದೆ. ಖಗೋಳಶಾಸ್ತ್ರಜ್ಞರ ಪ್ರಕಾರ, 2022 ರ ಸೂರ್ಯಗ್ರಹಣದ ನಂತರ ಹದಿನೈದು ದಿನಗಳ ನಂತರ ನಡೆಯುತ್ತಿರುವ ಚಂದ್ರಗ್ರಹಣ ನವೆಂಬರ್ 8 ರಂದು ದೇಶ ಮತ್ತು ವಿಶ್ವದ ಅನೇಕ ಭಾಗಗಳಲ್ಲಿ ಸಂಪೂರ್ಣ ಚಂದ್ರಗ್ರಹಣವಾಗಿ ಗೋಚರಿಸುತ್ತದೆ.
ಚಂದ್ರಗ್ರಹಣವು 08 ನವೆಂಬರ್ 2022, ಮಂಗಳವಾರ ಸಂಭವಿಸಲಿದೆ. ಸಂಜೆ 05:32 ಕ್ಕೆ ಪ್ರಾರಂಭವಾಗಿ ಸಂಜೆ 06.18 ಕ್ಕೆ ಕೊನೆಗೊಳ್ಳಲಿದೆ. ಗ್ರಹಣವು 45 ನಿಮಿಷ 48 ಸೆಕೆಂಡುಗಳ ಕಾಲ ಇರಲಿದೆ. ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ರಷ್ಯಾದ ಕೆಲವು ಭಾಗಗಳನ್ನು ಹೊರತುಪಡಿಸಿ, ಏಷ್ಯಾ, ಉತ್ತರ ಮತ್ತು ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ, ಉತ್ತರ ಅಟ್ಲಾಂಟಿಕ್ ಮಹಾಸಾಗರ, ಪೆಸಿಫಿಕ್ ಮಹಾಸಾಗರದ ಸಮೀಪದಲ್ಲಿ ಜನರು ತಮ್ಮ ಕಣ್ಣುಗಳಿಂದ ನೇರವಾಗಿ ಈ ಆಕಾಶ ವಿದ್ಯಮಾನವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.