(ನ್ಯೂಸ್ ಕಡಬ) newskadaba.com ಬೆಂಗಳೂರು ನ.03: ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಲಿಚ್ಚಿಸುವ ವಿದ್ಯಾರ್ಥಿಗಳಿಗೆ ಶೀಘ್ರವೇ ಗುಡ್ ನ್ಯೂಸ್ ಸಿಗಲಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಜೆಇಇ, ನೀಟ್, ಸಿಇಟಿ ಸೇರಿದಂತೆ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರ್ಕಾರದಿಂದಲೇ ಉಚಿತ ತರಬೇತಿ ಆರಂಭಿಸಲು ಗಂಭೀರ ಆಲೋಚನೆ ನಡೆದಿದೆ.
ಅಲ್ಲದೆ, ಸರ್ಕಾರಿ ಶಾಲೆ ಹಾಗೂ ಪಿಯು ಕಾಲೇಜುಗಳ ಕ್ರೀಡಾಸಕ್ತ ವಿದ್ಯಾರ್ಥಿಗಳಿಗೆ ವಿಶೇಷ ಕ್ರೀಡಾ ತರಬೇತಿ, ಕೆಲ ಉಚಿತ ಆರೋಗ್ಯ ಸೌಲಭ್ಯಗಳನ್ನು ಆರಂಭಿಸಲು ಕೂಡ ಚರ್ಚೆಗಳು ನಡೆದಿವೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಇಂತಹ ಮಹತ್ವಾಕಾಂಕ್ಷಿ ಯೋಜನೆಗಳಿಗೆ 31 ಕೋಟಿ ರೂ ವೆಚ್ಚದಲ್ಲಿ ಈ ವರ್ಷವೇ ಕ್ರಿಯಾ ಯೋಜನೆ ರೂಪಿಸಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಜಾರಿಗೊಳಿಸುವ ಚರ್ಚೆಗಳು ನಡೆದಿವೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಸ್ಪಷ್ಟಚಿತ್ರಣ ದೊರೆಯಲಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ ವೇಳೆಗೆ ಕ್ರಿಯಾ ಯೋಜನೆಗೆ ಸರ್ಕಾರದ ಅನುಮತಿ ಪಡೆದು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಆರಂಭಿಸುವ ಲೆಕ್ಕಾಚಾರ ಇಲಾಖೆಯದ್ದು. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಕಾಲೇಜಿನ ಸಮೀಪದ ಕಟ್ಟಡಗಳಲ್ಲಿ ಸಂಪನ್ಮೂಲಕ ವ್ಯಕ್ತಿಗಳಿಂದ ತರಬೇತಿ ಪ್ರಕ್ರಿಯೆ ನಡೆಸಲಾಗುತ್ತದೆ. ಇದಕ್ಕೆ ಹಾಲಿ ಇರುವ ಕೋಚಿಂಗ್ ಕೇಂದ್ರಗಳಲ್ಲಿ ತರಬೇತಿ ನೀಡುತ್ತಿರುವ ಅಥವಾ ಹೊಸ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ. ಬೋಧಕರಿಗೆ ನಿರ್ದಿಷ್ಟ ಗೌರವಧನವನ್ನೂ ನೀಡಲು ಉದ್ದೇಶಿಸಲಾಗಿದೆ.