(ನ್ಯೂಸ್ ಕಡಬ) newskadaba.com ನ.02: ದೇಶೀಯ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್, ಡೀಸೆಲ್ ದರದಲ್ಲಿ 2 ರೂ. ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಇಳಿಕೆಯಾಗುತ್ತಿರುವುದು ಮತ್ತು ಚಿಲ್ಲರೆ ಮಾರಾಟಗಾರರ ಪ್ರಾಡಕ್ಟ್ ಮಾರ್ಜಿನ್ ಉತ್ತಮಗೊಂಡಿರುವುದೇ ಬೆಲೆ ಇಳಿಕೆ ಮಾಡುವ ಕುರಿತು ಚಿಂತನೆಗೆ ಕಾರಣ ಎನ್ನಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ತೈಲ ದರದಲ್ಲಿ ಪ್ರತಿ ದಿನ 40 ಪೈಸೆಯಂತೆ ಇಳಿಕೆಯಾಗಲಿದೆ ಎಂದು ಸಿಎನ್ಬಿಸಿ ಆವಾಜ್ ವರದಿ ಮಂಗಳವಾರ ತಿಳಿಸಿತ್ತು. ಇದರ ಪರಿಣಾಮವಾಗಿ ಒಟ್ಟಾರೆಯಾಗಿ ಕೆಲವು ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ 2 ರೂ. ವರೆಗೆ ಇಳಿಕೆಯಾಗಬಹುದು ಎಂದು ವರದಿ ಅಂದಾಜಿಸಿದೆ.
ಹಿಮಾಚಲ ಪ್ರದೇಶ, ಗುಜರಾತ್ ವಿಧಾನಸಭೆ ಚುನಾವಣೆಗಳು ರಾಜಕೀಯವಾಗಿಯೂ ತೈಲ ಕಂಪನಿಗಳ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ. ಚುನಾವಣೆ ದಿನಾಂಕ ಸಮೀಪಿಸುತ್ತಿರುವಂತೆಯೇ ದರ ಕಡಿತದ ಮಹತ್ವದ ನಿರ್ಧಾರ ಪ್ರಕಟಗೊಳ್ಳುವ ಸಾಧ್ಯತೆಯೂ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ. ತೈಲ ಬೆಲೆಗಳಲ್ಲಿ ಮಂಗಳವಾರದಿಂದ ಇಳಿಕೆ ಟ್ರೆಂಡ್ ಕಂಡುಬರುತ್ತಿದ್ದು, ಪ್ರತಿ ಟನ್ ಕಚ್ಚಾ ತೈಲದ ಮೇಲಿನ ವೈಂಡ್ಫಾಲ್ ಗಳಿಕೆ ತೆರಿಗೆಯನ್ನು ಸರ್ಕಾರವು 11,000 ರೂ.ಗಳಿಂದ 9,500 ರೂ.ಗೆ ಇಳಿಕೆ ಮಾಡಿದೆ.