(ನ್ಯೂಸ್ ಕಡಬ) newskadaba.com ನವದೆಹಲಿ, ನ.02: 5ಜಿ ಸೇವೆ ಆರಂಭಿಸಿದ 30 ದಿನಗಳಲ್ಲೇ 10 ಲಕ್ಷ ಗ್ರಾಹಕರನ್ನು ಹೊಂದಿದ್ದೇವೆ ಎಂದು ದೂರಸಂಪರ್ಕ ಕಂಪನಿ ಭಾರ್ತಿ ಏರ್ಟೆಲ್ ಬುಧವಾರ ತಿಳಿಸಿದೆ. 5ಜಿ ಸೇವೆಗೆ ಅಕ್ಟೋಬರ್ 1ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಬಳಿಕ ಬೆಂಗಳೂರು ಸೇರಿ ದೇಶದ 13 ನಗರಗಳಲ್ಲಿ 5ಜಿ ಸೇವೆ ಆರಂಭವಾಗಿತ್ತು. ಸದ್ಯ ಇನ್ನೂ ಪೂರ್ಣ ಪ್ರಮಾಣದಲ್ಲಿ ಏರ್ಟೆಲ್ 5ಜಿ ಸೇವೆ ಆರಂಭವಾಗಿಲ್ಲ. ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸುವುದಾಗಿ ಕಂಪನಿ ತಿಳಿಸಿತ್ತು. ಇದೀಗ ಸೇವೆ ವಿಸ್ತರಿಸುವ ಹಂತದಲ್ಲಿರುವಾಗಲೇ ಭಾರಿ ಸಂಖ್ಯೆಯ ಗ್ರಾಹಕರು ದೊರೆತಿದ್ದಾರೆ ಎಂದು ಏರ್ಟೆಲ್ ಹೇಳಿದೆ.
ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್, ಸಿಲಿಗುರಿ, ನಾಗ್ಪುರ ಹಾಗೂ ವಾರಾಣಸಿಗಳಲ್ಲಿ ಹಂತಹಂತವಾಗಿ 5ಜಿ ಸೇವೆ ಆರಂಭಿಸುವುದಾಗಿ ಏರ್ಟೆಲ್ ಹೇಳಿತ್ತು. ಈ ನಗರಗಳಲ್ಲಿ ಸೇವೆಯನ್ನು ವಿಸ್ತರಿಸುವ ಕೆಲಸ ನಡೆಯುತ್ತಿದೆ ಎಂದು ಇದೀಗ ಕಂಪನಿ ತಿಳಿಸಿದೆ. ‘ಭಾರ್ತಿ ಏರ್ಟೆಲ್ 5ಜಿ ಗ್ರಾಹಕರ ಸಂಖ್ಯೆ 10 ಲಕ್ಷ ದಾಟಿದೆ. ವಾಣಿಜ್ಯ ಸೇವೆಗೆ ಚಾಲನೆ ನೀಡಿದ ಕೇವಲ 30 ದಿನಗಳಲ್ಲಿ ಕಂಪನಿ ಈ ಸಾಧನೆ ಮಾಡಿದೆ. ನೆಟ್ವರ್ಕ್ ವಿಸ್ತರಣೆ ಕಾರ್ಯ ಪೂರ್ತಿ ನಡೆಯುವುದಕ್ಕೂ ಮುನ್ನವೇ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.