(ನ್ಯೂಸ್ ಕಡಬ) newskadaba.com ಅ.25:ಕಳೆದ ಕೆಲವು ದಿನಗಳಿಂದ ಸತತ ಕುಸಿತ ಕಂಡಿದ್ದ ರೂಪಾಯಿ ಮೌಲ್ಯ ಮಂಗಳವಾರ ತುಸು ವೃದ್ಧಿಯಾಗಿದ್ದು ಭರವಸೆ ಮೂಡಿಸಿದೆ. ದೇಶೀಯ ಷೇರುಮಾರುಕಟ್ಟೆಯಲ್ಲಿ ಭರವಸೆಯ ವಹಿವಾಟು ದಾಲಾಗಿರುವುದು ರೂಪಾಯಿ ಮೌಲ್ಯ ವೃದ್ಧಿಗೆ ಪೂರಕವಾಗಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ 82.71ರಲ್ಲಿ ವಹಿವಾಟು ಆರಂಭಿಸಿದ್ದ ರೂಪಾಯಿ, ಬೆಳಿಗ್ಗೆ 10 ಗಂಟೆ ವೇಳೆಗೆ 26 ಪೈಸೆ ವೃದ್ಧಿಯಾಗಿ 82.62 ರಲ್ಲಿ ವಹಿವಾಟು ನಡೆಸಿತು.
ಈ ಹಿಂದಿನ ವಹಿವಾಟಿನ ಅವಧಿಯಲ್ಲಿ ಶುಕ್ರವಾರ 9 ಪೈಸೆ ಕುಸಿತ ದಾಖಲಿಸಿ ಡಾಲರ್ ವಿರುದ್ಧ 82.88 ರಲ್ಲಿ ವಹಿವಾಟು ಮುಗಿಸಿತ್ತು. ಸೋಮವಾರ ದೀಪಾವಳಿ ಪ್ರಯುಕ್ತ ವಿದೇಶಿ ವಿನಿಮಯ ಮಾರುಕಟ್ಟೆ ಕಾರ್ಯನಿರ್ವಹಿಸಿರಲಿಲ್ಲ. ಕಳೆದ ಕೆಲವು ದಿನಗಳಿಂದ ಪ್ರಮುಖ ಆರು ಕರೆನ್ಸಿಗಳ ಎದುರು ವೃದ್ಧಿಯಾಗುತ್ತಾ ಸಾಗಿದ್ದ ಡಾಲರ್ ಮೌಲ್ಯ ಇಂದು ಶೇಕಡಾ 0.12ರಷ್ಟು ಕುಸಿದು 111.85ರಲ್ಲಿ ವಹಿವಾಟು ನಡೆಸಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಶೇಕಡಾ 0.28 ಏರಿಕೆಯಾಗಿ ಬ್ಯಾರೆಲ್ಗೆ 93.52 ಡಾಲರ್ ಆಗಿದೆ.