ಮರ್ದಾಳ ಗ್ರಾ.ಪಂ. ಮಕ್ಕಳ ಗ್ರಾಮ ಸಭೆ ► ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಚರ್ಚೆ

(ನ್ಯೂಸ್ ಕಡಬ) newskadaba.com ಕಡಬ, ನ.14. ಮರ್ದಾಳ ಗ್ರಾ.ಪಂ.ನ 2017-18ನೇ ಸಾಲಿನ ಮಕ್ಕಳ ಗ್ರಾಮಸಭೆಯು ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲಾ ವಿದ್ಯಾರ್ಥಿ ನಾಯಕ ನಿತೇಶ್ ಕೆ.ಎಂ.ರವರ ಅಧ್ಯಕ್ಷತೆಯಲ್ಲಿ ಮರ್ದಾಳ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಮರ್ದಾಳ ಗ್ರಾ.ಪಂ.ಅಧ್ಯಕ್ಷೆ ಲಲಿತಾ ಎಂ ಮಾತನಾಡಿ ಮಕ್ಕಳೇ ಮುಂದಿನ ಭವಿಷ್ಯದ ಆಸ್ತಿಯಾಗಿದ್ದು ಮಕ್ಕಳಿಂದಲೇ ಸಮಾಜವನ್ನು ತಿದ್ದುವ ಕೆಲಸಗಳಾಗಬೇಕಿದೆ. ತಾವು ಗ್ರಾಮ ಸಭೆಯಲ್ಲಿ ಭಾಗವಹಿಸುವುದರ ಮೂಲಕ ವಿವಿಧ ಸಮಸ್ಯೆಗಳನ್ನು ತಿಳಿಸಿ ಇತ್ಯರ್ಥ ಪಡಿಸುವಂತೆ ವಿನಂತಿಸಿಕೊಂಡಿದ್ದೀರಿ, ತಮ್ಮ ಬೇಡಿಕೆಗನುಗುಣವಾಗಿ ಆದ್ಯತೆ ನೆಲೆಯಲ್ಲಿ ಗ್ರಾ.ಪಂ.ನಿಂದ ಸಾಧ್ಯವಾದಷ್ಟು ಅಭಿವೃದ್ದಿ ಪಡಿಸಲಾಗುವುದು ಎಂದರು.

ತಾ.ಪಂ.ಸದಸ್ಯ ಪಿ.ವೈ ಕುಸುಮಾರವರು ಮಾತನಾಡಿ ಇಂದಿನ ಸಮಸ್ಯೆಗಳ ಪರಿಹಾರಕ್ಕೆ ಮಕ್ಕಳೇ ಪೂರಕವಾಗಿರಬೇಕು. ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳ ಬಗ್ಗೆ ಅಂಜಿಕೆಯಿಲ್ಲದೆ ಕೇಳುವವರಾದರೆ ಮಾತ್ರ ಸಮಾಜ ಪರಿವರ್ತನೆ ಸಾಧ್ಯ. ನಿಮ್ಮ ಸಮಸ್ಯೆಗಳಿಗೆ ತಾ.ಪಂ.ನಿಂದ ಆಗುವ ಎಲ್ಲಾ ರೀತಿಯ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

Also Read  ಇಬ್ಬರು ಮಕ್ಕಳಿಗೆ ವಿಷ ನೀಡಿ ದಂಪತಿಗಳು ಆತ್ಮಹತ್ಯೆಗೆ ಶರಣು

ಗ್ರಾ.ಪಂ.ಉಪಾಧ್ಯಕ್ಷೆ ಲತಾ ಕೆ.ಎಸ್, ಸದಸ್ಯರಾದ ಅಬೂಬಕ್ಕರ್, ಹರೀಶ್ ಕೋಡಂದೂರು, ಗಿರಿಜ, ಮರ್ದಾಳ ಉ.ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕಿ ದೇವಕಿ, ಸೈಂಟ್ ಮೇರಿಸ್ ಪ್ರೌಢಶಾಲಾ ಶಿಕ್ಷಕ ಸುಬ್ರಹ್ಮಣ್ಯ, ಪಾಲೆತ್ತಡ್ಕ ಶಾಲಾ ಶಿಕ್ಷಕಿ ಮಮತಾ, ಕರ್ಮಾಯಿ ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕಿ ರೇಖಾ ಎಂ, ಕಿ.ಆ.ಸಹಾಯಕಿ ಮರಿಯಮ್ಮ, ರಾಹೆಲ್ ಕೆ.ಟಿ  ಉಪಸ್ಥಿತರಿದ್ದರು.

ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಚೆನ್ನಪ್ಪ ಗೌಡ ಇಲಾಖಾ ಮಾಹಿತಿ ನೀಡಿದರು. ಸಬೆಯಲ್ಲಿ ಚರ್ಚಿತ ವಿಷಯಗಳು ಕರ್ಮಾಯಿ ಶಾಲಾ ವಿದ್ಯಾರ್ಥಿ ತೇಜಸ್‍ರವರು ಮರ್ದಾಳ ಕರ್ಮಾಯಿ ರಸ್ತೆ ದುರಸ್ತಿ ಬಗ್ಗೆ ಪ್ರಶ್ನಿಸಿದರೆ, ಬಂಟ್ರ ಶಾಲಾ ವಿದ್ಯಾರ್ಥಿನಿ ತಸ್ಸೀರಾ ಶಾಲಾ ಎದುರುಗಡೆ ಮರ್ದಾಳ ಪೇಟೆಯಲ್ಲಿ ಚರಂಡಿ ದುರಸ್ತಿಗೊಳಿಸುವಂತೆ ಆಗ್ರಹಿಸಿದರು. ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲಾ ವಿದ್ಯಾರ್ಥಿ ಶ್ರಿಶಾಂತ್‍ರವರು ಶಾಲೆಯಲ್ಲಿ ಹುಡುಗರ ಶೌಚಾಲಯ ನಿರ್ಮಿಸುವಂತೆ ಕೇಳಿಕೊಂಡರು. ಪಾಲೆತ್ತಡ್ಕ ಶಾಲೆಯಲ್ಲಿ ಶಿಕ್ಷಕರ ಕೊರತೆ ನೀಗಿಸುವಂತೆ ಶಾಲಾ ವಿದ್ಯಾರ್ಥಿ ಕೀರ್ತಿಕ್ ವಿನಂತಿಸಿ  ಶಾಲೆಯಲ್ಲಿ ವಾರದಲ್ಲಿ 5 ದಿನ ನೀಡುವ ಹಾಲಿನ ಹುಡಿ  ಬದಲು ನಂದಿನಿ ಹಾಲು ನೀಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು.  ಗ್ರಾ.ಪಂ.ಕಾರ್ಯದರ್ಶಿ ವೆಂಕಟರಮಣ ಪ್ರಾಸ್ತಾವಿಸಿದರು.  ಬಂಟ್ರ ಶಾಲಾ ಶಿಕ್ಷಕಿ ರಾಮಕೃಷ್ಣ ಮಲ್ಲಾರ ಸ್ವಾಗತಿಸಿದರು. ಪಂಚಾಯಿತಿ ಲೆಕ್ಕಸಹಾಯಕ ಭುವನೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಿಬ್ಬಂದಿಗಳಾದ ವಾಮನ್ ನಾಯ್ಕ, ಆಶಾಲತಾ, ಹಸನ್ ಸಹಕರಿಸಿದರು.

error: Content is protected !!
Scroll to Top