(ನ್ಯೂಸ್ ಕಡಬ) newskadaba.com ಕಡಬ, ನ.11. ಕಾಂಗ್ರೆಸ್ ಸರಕಾರದ ಸಾಧನೆ ಮತ್ತು ಬಿಜೆಪಿ ಸರಕಾರದ ವೈಪಲ್ಯವನ್ನು ಮನೆ ಮನೆ ಭೇಟಿ ವೇಳೆ ಜನರಿಗೆ ತಿಳಿಸಿ ಮನದಟ್ಟು ಮಾಡಬೇಕು ಎಂದು ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಸವಿತಾ ರಮೇಶ್ ಹೇಳಿದರು.
ಬಲ್ಯ ಗ್ರಾಮದ ದೇರಾಜೆ ಬೂತ್‍ನ ವತಿಯಿಂದ ನಡೆದ ಮನೆ ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಅಧಿಕಾರ ಇರುವುದು ಜನರ ಸೇವೆ ಮಾಡಲು ಆದರೆ ಇದನ್ನು ದುರುಪಯೋಗ ಮಾಡಬಾರದು, ಪಕ್ಷದ ಪದಾಧಿಕಾರಿಗಳಿಗೆ ದೊಡ್ಡ ಜವಾಬ್ದಾರಿ ಇದೆ, ಚುನಾವಣೆ ಸಮಯ ಹತ್ತಿರ ಬರುತ್ತಿರುವುದರಿಂದ ಎಲ್ಲರೂ ನಮ್ಮ ಪಕ್ಷದ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದ ಅವರು ಬಿಜೆಪಿಯವರು ಹಾಲಿಗೆ 2 ರೂ ಬೆಂಬಲ ಬೆಲೆ ನೀಡಿದಾಗ ಅದನ್ನೆ ದೊಡ್ಡದು ಮಾಡುತ್ತಿದ್ದರು ಆದರೆ ನಾವು 5 ರೂ ಕೊಟ್ಟಿದ್ದೆವೆ ಇದನ್ನು ಜನಸಾಮಾನ್ಯರಿಗೆ ತಿಳಿಸಬೇಕು, ಸಿದ್ದರಾಮಯ್ಯ ಸರಕಾರ ದೂರದೃಷ್ಟಿಯನ್ನುಟ್ಟುಕೊಂಡು ಆಡಳಿತ ನಡೆಸುತ್ತಿದ್ದು ಪ್ರಣಾಳಿಕೆಯಲ್ಲಿ ಯಾವ ಆಶ್ವಾಸನೆ ಕೊಡಲಾಗಿದೆಯೋ ಅದನ್ನು ಯಥಾವತ್ತಾಗಿ ಅನುಷ್ಟಾನ ಮಾಡಿದ್ದಾರೆ, ನುಡಿದಂತೆ ನಡೆದ ಸರಕಾರ ಸಿದ್ದರಾಮಯ್ಯ ಸರಕಾರ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಶಿರಾಡಿಯವರು ಮಾತನಾಡಿ, ಈಗಾಗಲೇ ಪ್ರತಿ ಬೂತ್‍ಗಳಿಗೂ ಉಸ್ತುವಾರಿಗಳನ್ನಾಗಿ ನೇಮಿಸಿಕೊಂಡು ಆ ಬೂತ್‍ನ ಜವಾಬ್ದಾರಿಗಳನ್ನು ನೀಡಲಾಗಿದ್ದು ಎಲ್ಲರೂ ಶಕ್ತಿ ಮೀರಿ ಪಕ್ಷಕ್ಕಾಗಿ ದುಡಿದು ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.
ನೆಲ್ಯಾಡಿ ಕ್ಷೇತ್ರದ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ ಮಾತನಾಡಿ, ನಾವು ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗಳನ್ನು ಜನರಿಗೆ ಸರಿಯಾಗಿ ತಿಳಿಸಿದರೆ ನಮಗೆ ಮತ ಖಂಡಿತಾ ಸಿಗಬಹುದು, ಇತ್ತೀಚಿನ ಸಮೀಕ್ಷೆಯಲ್ಲಿಯೂ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸಲಾಗಿದೆ, ಹಾಗಿರುವಾಗ ನಮ್ಮ ಸಾಧನೆಯನ್ನು ಜನರಿಗೆ ಮನದಟ್ಟು ಮಾಡಿಸುವುದೇ ಕೆಲಸ ಎಂದು ಹೇಳಿದರು.
ಕಡಬ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಜನ ವಿರೋಧಿ ಆಡಳಿತ ನಡೆಸುತ್ತಿರುವುದರಿಂದ ನಮಗೆ ಕರಾಳ ದಿನ ಸ್ಥಿತಿ ಬಂದಿದೆ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಹಿಂದೆ ಪ್ರಣಾಳಿಕೆಯಲ್ಲಿ ಘೋಷನೆ ಮಾಡಿದ ವಿಚಾರಗಳಲ್ಲದೆ ಇತರ ಪ್ರಮುಖ ಸೌಲಭ್ಯಗಳನ್ನು ಜನರಿಗೆ ನೀಡಿದೆ, ಕಡಬ ಹೋಬಳಿಯಲ್ಲಿ 5000 ಮಂದಿಗೆ 94ಸಿ ಯಡಿಯಲ್ಲಿ ಹಕ್ಕು ಪತ್ರ ನೀಡಲಾಗಿದೆ, ಆದರೂ ಆರ್.ಟಿ.ಸಿ ಸಿಗದಿದ್ದರೆ ಜನ ಸರಕಾರಕ್ಕೆ ಬ್ಯೆಯುತ್ತಾರೆ, ಈ ಬಗ್ಗೆ ಜನರಿಗೆ ಮನದಟ್ಟು ಮಾಡಬೇಕು, ಕಾಂಗ್ರೆಸ್ ಸರಕಾರ ಸಾಧನೆ ಒಂದೆರಡಲ್ಲ ಅನೇಕ ಸೌಲಭ್ಯಗಳನ್ನು ನೀಡಿದೆ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ| ರಘು ಮಾತನಾಡಿ, ಕಳೆದ ಬಾರಿ ಅತ್ಯಲ್ಪ ಮತದಲ್ಲಿ ನಮಗೆ ಸೋಲಾಗಿದೆ ಆದರೆ ಈ ಬಾರಿ ತಾ.ಪಂ.ಜಿ.ಪಂ.ಕ್ಷೇತ್ರಗಳಲ್ಲಿ ನಾವು ಜಯಗಳಿಸಿದ್ದೆವೆ ಆದುದರಿಂದ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಲ್ಲಿ ನಾವು ಜಯಭೇರಿ ಗಳಿಸುತ್ತೇವೆ ಎಂದು ಹೇಳಿದ ಅವರು ಈ ಬಗ್ಗೆ ಕಾರ್ಯಕರ್ತರು ಈಗಿಂದಲೇ ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ವಿಜಯ ಕುಮಾರ್ ರೈ ಕರ್ಮಾಯಿ ಮಾತನಾಡಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳಬೇಕಾಗಿಲ್ಲ ಎಲ್ಲವನ್ನು ಕೊಟ್ಟಿರುವುದು ಕಾಂಗ್ರೆಸ್ ಸರಕಾರ, ಇನ್ನು ಜನರಿಗೆ ಪಕ್ಷದ ಕಾರ್ಯಕ್ರಮಗಳನ್ನು ತಿಳಿಸುವ ಕೆಲಸ ಆಗಬೇಕು, ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವಂತೆ ಕಾರ್ಯಕರ್ತರು ಶಕ್ತಿ ಮೀರಿ ದುಡಿಯಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಸಮಿತಿಯ ಪ್ರ. ಕಾರ್ಯದರ್ಶಿ ಎಚ್.ಕೆ ಇಲ್ಯಾಸ್ ಮಾತನಾಡಿ ರಾಜ್ಯ ಸರಕಾರದ ಅನುದಾನದಲ್ಲಿ ಕೆಲವು ಜನಪರ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ಸೌಲಭ್ಯಗಳನ್ನು ನೀಡಿದರೆ ಅದನ್ನು ಬಿಜೆಪಿಯವರು ಅದು ಕೇಂದ್ರ ಸರಕಾರದ ಯೋಜನೆ ಎಂದು ಜನತೆಗೆ ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ, ಕೇಂದ್ರ ಸರಕಾರ ಉಜ್ವಲ ಯೋಜನೆ ಅರ್ಧದಲ್ಲಿ ನಿಂತಿದೆ, ರಾಜ್ಯದಲಲಿ ನಮ್ಮ ಸರಕಾರ ಇದ್ದರೂ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಶಾಸಕರಿಲ್ಲದೆ ಅಭಿವೃದ್ದಿ ಕುಂಠಿತ ಆಗಿದೆ ಮುಂದಿನ ದಿನಗಳಲ್ಲಿ ನಮ್ಮ ಪಕ್ಷದ ಶಾಸಕರು ಇದ್ದರೆ ಅಭಿವೃದ್ದಿ ಖಂಡಿತಾ ಸಾಧ್ಯ ಎಂದರು. ವೇದಿಕೆಯಲ್ಲಿ ಕಡಬ ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಉಪಾ ಅಂಚನ್, ಕೌಕ್ರಾಡಿ ತಾ.ಪಂ. ಸದಸ್ಯೆ ಕೆ.ಟಿ.ವಲ್ಸಮ್ಮ ಮಾತನಾಡಿದರು.
ಕಾಂಗ್ರೆಸ್ ಜಿಲ್ಲಾ ಸಮಿತಿಯ ಸದಸ್ಯರಾದ ನೀಲಾವತಿ ಶಿವರಾಮ್, ಶರೀಫ್ ಎ.ಎಸ್. ಕಾಂಗ್ರೆಸ್ ಮುಖಂಡ ರಾಯ್ ಅಬ್ರಹಾಂ ಮೊದಲಾದವರು ಉಪಸ್ಥಿತರಿದ್ದರು. ಸುಳ್ಯ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಧೀರ್ ದೇವಾಡಿಗ, ದೇರಾಜೆ ಬೂತ್ ಸಮಿತಿ ಅಧ್ಯಕ್ಷ ಆನಂದ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಬಾಲಕೃಷ್ಣ ಬಳ್ಳೇರಿ, ಗ್ರಾ.ಪಂ. ಸದಸ್ಯರುಗಳಾದ ಶಾಲೀನಿ ಸತೀಶ್ ನಾೈಕ್,ಲಿಂಗಪ್ಪ ಗೌಡ, ಬಿನೋಜ್, ಸುಶೀಲ, ಸಜನಿ, ಸೂಸಮ್ಮ ಪ್ರಮುಖರಾದ ಎಲ್ಸಿ ತೋಮಸ್, ಸುಲೈಮಾನ್ ಮರ್ದಾಳ, ಅವೀನ್ ಪೂಜಾರಿ, ಯಾಕೂಬ್, ಸುಭಾಷ್ ಮೊದಲಾದವರು ಅತಿಥಿಗಳಿಗೆ ಹೂ ಗುಚ್ಚ ನೀಡಿ ಗೌರವಿಸಿದರು. ಕುಟ್ರುಪಾಡಿ ಗ್ರಾ.ಪಂ. ಸದಸ್ಯ ಮಹಮ್ಮದಾಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಕುಟ್ರುಪಾಡಿ ಗ್ರಾ.ಪಂ. ಮಾಜಿ ಸದಸ್ಯ ಟಿ.ಎಂ.ಮ್ಯಾತ್ಯೂ ವಂದಿಸಿದರು. ಮಾಜಿ ಸದಸ್ಯ ಕ್ಷೇವಿಯರ್ ಬೇಬಿ ಕಾರ್ಯಕ್ರಮ ನಿರೂಪಿಸಿದರು. ಕಡಬ ಗ್ರಾ.ಪಂ. ಸದಸ್ಯೆ ನೀಲಾವತಿ ಶಿವರಾಮ ಪ್ರಾರ್ಥನೆ ಹಾಡಿದರು.
ಹಿರಿಯ ಕಾಂಗ್ರೆಸ್ ಕಾರ್ಯಕರ್ತರಾದ ನಿವೃತ್ತ ಮುಖ್ಯ ಶಿಕ್ಷಕ ಪೆರ್ಗಡೆ ಗೌಡ, ಎಚ್.ಪಿ. ಅಬ್ದುಲ್ ಕರೀಂ, ಬಾಲಕೃಷ್ಣ ಗೌಡ ರವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮೂಳೆ ಮುರಿತಕ್ಕೊಳಗಾಗಿ ತೀವ್ರ ಸಂಕಷ್ಟದಲ್ಲಿರುವ ಚಂದ್ರಪ್ಪ ಕುಟುಂಬಕ್ಕೆ ಸಭೆಯಲ್ಲಿ ಸೇರಿದ ಕಾರ್ಯಕರ್ತರು ಹಾಗೂ ಮುಖಂಡರಿಂದ ಸಂಗ್ರಹಿಸಲಾದ ಒಟ್ಟು 8250ರೂ ಚಂದ್ರಪ್ಪನವರ ತಾಯಿ ಕುಂಞಯವರಿಗೆ ನೀಡಲಾಯಿತು.