(ನ್ಯೂಸ್ ಕಡಬ) newskadaba.com ಕಡಬ, ನ.7. ಶ್ರೀಕ್ಷೇ.ಧ.ಗ್ರಾ.ಯೋಜನೆ ಮತ್ತು ಶ್ರೀ ಧರ್ಮಸ್ಥಳ ಮೆಡಿಕಲ್ ಟ್ರಸ್ಟ್‌ನ ಸಹಯೋಗದೊಂದಿಗೆ ಗ್ರಾಮಾಭಿವೃದ್ದಿ ಯೋಜನೆಯ ಬಿಳಿನೆಲೆ ವಲಯದ ಸಹಕಾರದೊಂದಿಗೆ ಕೋಡಿಂಬಾಳದ ರಾಮನಗರ ಶ್ರೀರಾಮ ಭಜನಾಮಂದಿರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಚಾರಿ ಆಸ್ಪತ್ರೆಯ ಉಚಿತ ಚಿಕಿತ್ಸಾ ಶಿಬಿರವು ಮಂಗಳವಾರ ಉದ್ಘಾಟನೆಗೊಂಡಿತು.
ಕೋಡಿಂಬಾಳ ಓಂತ್ರಡ್ಕ ಸರಕಾರಿ ಉ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ತುಕಾರಾಮ ಗೌಡರವರು ಶಿಬಿರವನ್ನು ಉದ್ಘಾಟಿಸಿ, ಶ್ರೀಕ್ಷೇತ್ರ ಧರ್ಮಸ್ಥಳವು ಅನ್ನದಾನ, ವಿದ್ಯಾದಾನ ಮತ್ತು ಆರೋಗ್ಯದಾನ ಮುಂತಾದ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜದ ಉನ್ನತಿಯನ್ನು ನಡೆಸುವ ಕಾರ್ಯವನ್ನು ಮಾಡುತ್ತಿದೆ. ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯುತ್ತಿರುವ ಜನಜಾಗೃತಿ ವೇದಿಕೆಯು ಸಮಾಜದಲ್ಲಿನ ದುಶ್ಚಟಗಳ ವಿರುದ್ದ ಸಮರ ಸಾರುವ ಮೂಲಕ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಸಂಚಾರಿ ಆಸ್ಪತ್ರೆಯ ಮೂಲಕ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ದಾನ ಮಾಡುವ ಈ ಉಚಿತ ಚಿಕಿತ್ಸಾ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳರವರು ಶ್ರೀಕ್ಷೇ.ಧ.ಗ್ರಾ.ಯೋಜನೆಯ ಮೂಲಕ ಸಮಾಜದಲ್ಲಿ ಧನಾತ್ಮಕ ಬದಲಾವಣೆಯನ್ನು ತರಲಾಗಿದೆ. ಮಹಿಳೆಯರು ಸಾಮಾಜಿಕವಾಗಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆಯನ್ನು ಮೈಗೂಡಿಸಿಕೊಳ್ಳಲು ಗ್ರಾಮಾಭಿವೃದ್ದಿ ಯೋಜನೆಯು ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಯೋಜನೆಯ ಮೂಲಕ ಗ್ರಾಮಗಳಲ್ಲಿ ಆರ್ಥಿಕ ಶಿಸ್ತು, ಸಾಮರಸ್ಯ ಹಾಗೂ ಸೌಹಾರ್ದತೆಯ ವಾತಾವರಣ ನಿರ್ಮಾಣವಾಗಿದ್ದು ಸಮಾಜದ ಬದಲಾವಣೆಯ ಕ್ರಾಂತಿ ಉಂಟಾಗಿದೆ ಎಂದರು.
ಸಂಚಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾರಾಯಣ ಪ್ರಭುರವರು ಮಾತನಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ ಮೂಲಕ ಕಳೆದ ಹಲವು ದಶಕಗಳಿಂದ ಗ್ರಾಮೀಣ ಭಾಗಗಳಲ್ಲಿ ಸಂಚಾರಿ ಆಸ್ಪತ್ರೆಯ ಶಿಬಿರಗಳನ್ನು ನಡೆಸುವ ಮೂಲಕ ಉಚಿತ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತಿದೆ. ಕೋಡಿಂಬಾಳದಲ್ಲಿಯೂ ವಾರಕ್ಕೆರಡು ಸಲದಂತೆ ಪ್ರತೀ 3 ದಿನಗಳಿಗೊಮ್ಮೆ ಶಿಬಿರವು ನಡೆಯಲಿದೆ. ಎಲ್ಲಾ ತರಹದ ಕಾಯಿಲೆ ಹಾಗೂ ವ್ಯಾಧಿಗಳಿಗೆ ಸರಿಯಾದ ಪರೀಕ್ಷೆ ನಡೆಸಿ ಸೂಕ್ತ ಔಷಧಿ ಯಾ ಸಲಹೆಗಳನ್ನು ಧರ್ಮಾರ್ಥವಾಗಿ ನೀಡಲಾಗುತ್ತದೆ. ಗ್ರಾಮಸ್ಥರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಓಂತ್ರಡ್ಕ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಮಾಧವ ಭಟ್, ಕಡಬ ಗ್ರಾ.ಪಂ.ಮಾಜಿ ಅಧ್ಯಕ್ಷ ಬಾಬು ರೈ ಪಾಜೋವು, ಕುಟ್ರುಪ್ಪಾಡಿ ಗ್ರಾ.ಪಂ.ಸದಸ್ಯ ಶಿವಪ್ರಸಾದ್ ರೈ ಮೈಲೇರಿ, ಅತಿಥಿಗಳಾಗಿ ಆಗಮಿಸಿದರು. ಗ್ರಾಮಾಭಿವೃದ್ದಿ ಯೋಜನೆಯ ಬಿಳಿನೆಲೆ ವಲಯ ಮೇಲ್ವಿಚಾರಕ ರಾಜು ಗೌಡ ಸ್ವಾಗತಿಸಿ, ಪ್ರಸ್ತಾವಣೆ ಗೈದರು. ಸೇವಾಪ್ರತಿನಿಧಿ ನಳಿನಿ ನಿರೂಪಿಸಿ ವಂದಿಸಿದರು. ಸೇವಾಪ್ರತಿನಿಧಿ ನೇತ್ರ ಉಪಸ್ಥಿತರಿದ್ದರು.