ಹುಟ್ಟೂರಿಗೆ ಆಗಮಿಸಿದ ಹಿರಿಯ ಸಾಹಿತಿ ಕೆ.ಗೋಪಾಲ ರಾವ್ ರ ಪಾರ್ಥಿವ ಶರೀರ ► ಅನೇಕ ಗಣ್ಯರಿಂದ ಅಂತಿಮ ದರ್ಶನ

(ನ್ಯೂಸ್ ಕಡಬ) newskadaba.com ಕಡಬ, ನ.07. ಹೃದಯ ಸಂಬಂಧಿ ಖಾಯಿಲೆಯಿಂದಾಗಿ ಸೋಮವಾರದಂದು ಮೃತಪಟ್ಟ ನಿವೃತ್ತ ಮುಖ್ಯ ಶಿಕ್ಷಕ, ಕಡಬದ ಹಿರಿಯ ಸಾಹಿತಿ ಕೆ.ಗೋಪಾಲ್ ರಾವ್(78)ರವರ ಪಾರ್ಥಿವ ಶರೀರವನ್ನು ಇಂದು ಮುಂಜಾನೆ ಹುಟ್ಟೂರು ಕಡಬ ಶ್ರೀಕಂಠಸ್ವಾಮಿ, ಮಹಾಗಣಪತಿ ದೇವಸ್ಥಾನದ ಬಳಿ ವಾಸವಾಗಿದ್ದ ಅವರ ಮನೆಗೆ ಇಂದು ಬೆಳಿಗ್ಗೆ 8.30ರ ಸುಮಾರಿಗೆ ತರಲಾಯಿತು.

ಕಳೆದ ಕೆಲವು ಸಮಯಗಳಿಂದ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಇವರನ್ನು ಇತ್ತೀಚೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರು ಮಕ್ಕಳ ಸಾಹಿತಿಯಾಗಿ, ನಾಟಕಕಾರರಾಗಿ, ಧಾರ್ಮಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು. ಆದರ್ಶ ಶಿಕ್ಷಕನಾಗಿ ನಿವೃತ್ತಿ ಪಡೆದಿದ್ದ ಇವರು ಐತ್ತೂರು, ಬಿಳಿನೆಲೆ, ಕಡಬ, ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರುಗಳಾಗಿ, ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಂದಿ ಶಿಕ್ಷಕರಾಗಿ ಹೀಗೆ ಒಟ್ಟು 35 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಶಿಕ್ಷಣ ಕ್ಷೇತ್ರದ ಇವರ ಸೇವೆಗಾಗಿ ರಾಜ್ಯ ಸರಕಾರ ಕೊಡಮಾಡುವ ತಾಲೂಕು ಮಟ್ಟದ, ಜಿಲ್ಲಾ ಮಟ್ಟದ ಹಾಗೂ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದರು. ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದ ಇವರು ಗೋರಾಕೆ ಎಂಬ ಕಾವ್ಯ ನಾಮದೊಂದಿಗೆ ದೇವಲೋಕದಲ್ಲಿ ಚುನಾವಣೆ, ಭಕ್ತಾಂಜಲಿ, ಸುಪ್ರಭಾತ, ಬಾಲಗೋಪಾಲ ವಚನಗಳು ಸೇರಿದಂತೆ 16 ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದರು. ಮಾತ್ರವಲ್ಲ ನಾಟಕಕಾರರಾಗಿಯೂ ಪರಿಚಿತರಾಗಿದ್ದರು. ಧಾರ್ಮಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ್ದ ಮೃತರು ವಲಯದ ಹತ್ತಾರು ದೇವಸ್ಥಾನಗಳ ಆಡಳಿತ ಮೊಕ್ತೇಸರರಾಗಿ, ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವಗಳನ್ನು ನೇರವೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Also Read  ಟಿಪ್ಪರ್‌ ಡಿಕ್ಕಿಯಾಗಿ RSS‌‌ ಹಿರಿಯ ಕಾರ್ಯಕರ್ತನ ಮೃತ್ಯು ಪ್ರಕರಣ ➤ ಪರಾರಿಯಾಗಿದ್ದ ಟಿಪ್ಪರ್‌ ಚಾಲಕನ ಬಂಧನ

 

ಇವರ ಧಾರ್ಮಿಕ ಸೇವೆಗೆ ಧಾರವಾಡದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ, ಬೆಂಗಳೂರು ಕನ್ನಡ ಹಾಗೂ ಅಭಿವೃದ್ಧಿ ಸಮಿತಿಯವರಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸಮಾಜ ಸೇವೆಗೆ ಕರ್ಮಯೋಗಿ ಪ್ರಶಸ್ತಿ, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ತಾಲೂಕು ಮಟ್ಟದ ಪ್ರಶಸ್ತಿ ಪಡೆದಿದ್ದಾರೆ. ಇವರ ವಿವಿಧ ಸೇವೆಯನ್ನು ಪರಿಗಣಿಸಿ ಸುಮಾರು 33 ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿದ್ದವು. ಸುಮಾರು ಹದಿನೈದಕ್ಕೂ ಹೆಚ್ಚು ಸ್ಮರಣ ಸಂಚಿಕೆಗಳಿಗೆ ಪ್ರಧಾನ ಸಂಪಾದಕರಾಗಿ ದುಡಿದ ಹೆಗ್ಗಳಿಕೆ ಇವರದ್ದಾಗಿತ್ತು. ಮಾತ್ರವಲ್ಲದೆ ಧರ್ಮಸ್ಥಳ ಧರ್ಮಾಧಿಕಾರಿ ಡಾ|ಡಿ,ವೀರೆಂದ್ರ ಹೆಗ್ಗಡೆ ಸೇರಿದಂತೆ ವಿವಿಧ ಮಠಾಧೀಶರುಗಳಿಂದ ಸನ್ಮಾನ ಪಡೆದಿದ್ದರು.

Also Read  ನಾಳೆ (ಸೆ.17) ಸುಬ್ರಹ್ಮಣ್ಯದಲ್ಲಿ ಟಿವಿಎಸ್ ಔಟ್ ಲೆಟ್ ಶುಭಾರಂಭ ► ಟಿವಿಎಸ್ ಅಧಿಕೃತ ಡೀಲರ್ ಅಡಿಗ ಮೋಟಾರ್ಸ್ ನ ಅಂಗಸಂಸ್ಥೆ

ಕಡಬ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷರಾದ ಸಿ.ಫಿಲಿಪ್, ಜಿ.ಪಂ.ಸದಸ್ಯರಾದ ಪಿ.ಪಿ.ವರ್ಗೀಸ್, ಜಿ.ಪಂ. ಮಾಜಿ ಸದಸ್ಯ ಕೃಷ್ಣ ಶೆಟ್ಟಿ, ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ, ಹಿಂದೂ ಸಂಘಟನೆಯ ಮುಖಂಡ ರವಿರಾಜ್ ಶೆಟ್ಟಿ, ಕಡಬ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜನಾರ್ಧನ ಗೌಡ ಪಣೆಮಜಲು, ಜೆಡಿಎಸ್ ಮುಖಂಡ ಸಯ್ಯದ್ ಮೀರಾ ಸಾಹೇಬ್, ಪ್ರಮುಖರಾದ ಸಿ.ಪಿ.ಸೈಮನ್, ಸುಧೀರ್ ಕುಮಾರ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

error: Content is protected !!
Scroll to Top