(ನ್ಯೂಸ್ ಕಡಬ) newskadaba.com ಮ0ಗಳೂರು, ನ.6. (ಕರ್ನಾಟಕ ವಾರ್ತೆ) ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಆಯ್ದ ಪ್ರಾಥಮಿಕ ಶಾಲೆಯ ಒಂದು ಮತ್ತು ಎರಡನೇ ತರಗತಿಯ ಮಕ್ಕಳ ರಕ್ತ ಪರೀಕ್ಷೆ ನಡೆಸುವ ಕಾರ್ಯಕ್ರಮವು ನವೆಂಬರ್ 13 ರಿಂದ 17 ರವರೆಗೆ ಜಿಲ್ಲೆಯಲ್ಲಿ ನಡೆಯಲಿದೆ.

ಈ ಬಗ್ಗೆ ಪೂರ್ವಸಿದ್ಧತಾ ಸಭೆಯು ಶನಿವಾರ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಆಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತಾನಾಡಿದ ಅವರು ಎಲ್ಲಾ ವಿವರಗಳನ್ನು ಪರಿಶಿಲಿಸಿ ನಿಗದಿ ಪಡಿಸಿದ ದಿನಾಂಕಗಳಂದು ವಿದ್ಯಾರ್ಥಿಗಳು ಹಾಜರಿರುವಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ರಕ್ತ ಪರೀಕ್ಷೆ ಸಂದರ್ಭದಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳುವ ಬಗ್ಗೆ ಅವರು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಆನೆಕಾಲು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ರೋಗಪ್ರಸಾರ ನಿಧಾರಣಾ ಸಮೀಕ್ಷಾ ಕಾರ್ಯಕ್ರಮ ಅನುಷ್ಟಾನ ಕಾರ್ಯಕ್ರಮದ ಉದ್ದೇಶ ಹಾಗೂ ಕ್ರಿಯಾ ಯೋಜನೆ ಬಗ್ಗೆ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಅರುಣ್ ಕುಮಾರ್ ಎಸ್.ಪಿ. ಅವರು ವಿವರಿಸಿದರು. ಸಭೆಯಲ್ಲಿ ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.