ಆಲಂಕಾರು: ಸಾಮಾನ್ಯ ಸಭೆ ► ಅಕ್ರಮ ಅಂಗಡಿಗಳ ತೆರವಿಗೆ ನಿರ್ಣಯ

(ನ್ಯೂಸ್ ಕಡಬ) newskadaba.com ಕಡಬ, ನ.2. ಆಲಂಕಾರು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದ ಬಾರ್ಕುಲಿ ಅಧ್ಯಕ್ಷೆತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವ್ಯಾಪಾರ ಪರವಾನಿಗೆ ಇಲ್ಲದೆ ಕಾರ್ಯಾಚರಿಸುವ ಅಂಗಡಿಗಳ ಮೇಲೆ ಆಡಳಿತ ಮಂಡಳಿಯ ಸೂಕ್ತ ಕ್ರಮಕೈಗೊಳ್ಳುವ ನಿರ್ಣಯವನ್ನು ಅಂಗಿಕರಿಸಲಾಯಿತು.

ಪಂಚಾಯಿತಿ ಸದಸ್ಯ ಕೇಶವ ಗೌಡ ಆಲಡ್ಕ ವಿಚಾರ ಪ್ರಸ್ತಾಪಿಸಿ, ಆಲಂಕಾರು ಪೇಟೆಯಲ್ಲಿ ಕೇವಲ ಕಟ್ಟಡ ಮಾಲಿಕರು ಕಟ್ಟಡ ಪರವಾನಿಗೆ ಮಾತ್ರ ಪಡೆದುಕೊಂಡು ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ವ್ಯಾಪಾರಸ್ಥರು ವ್ಯಾಪರ ಪರವಾನಿಗೆ ಪಡೆದುಕೊಳ್ಳದೆ ಗ್ರಾಮ ಪಂಚಾಯಿತಿಗೆ ಆದಾಯಕ್ಕೆ ವಂಚನೆ ಮಾಡುತ್ತಿದ್ದಾರೆ. ಈಗಾಗಲೇ ಆಲಂಕಾರಿನಲ್ಲಿ ಎಷ್ಟು ಅಂಗಡಿಗಳು ವ್ಯಾಪಾರ ಪರವಾನಿಗೆ ಇಲ್ಲದೆ ವ್ಯಾಪಾರ ನಡೆಸುತ್ತಿವೆ. ಪರವಾನಿಗೆ ಇಲ್ಲದ ಅಂಗಡಿಗಳ ವಿರುದ್ದ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಮುಂದಿನ ಸಭೆಯಲ್ಲಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಮುಂದಿನ ಸಭೆಯಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುವುದು ಮತ್ತು ಮುಂದಿನ ಒಂದು ತಿಂಗಳ ಒಳಗಾಗಿ ಎಲ್ಲಾ ವ್ಯಾಪಾರಸ್ಥರು ವ್ಯಾಪಾರ ಪರವಾನಿಗೆ ಪಡೆಯುವಂತೆ ನೊಟೀಸು ಜಾರಿ ಮಾಡಲಾಗುವುದು. ಇದಕ್ಕೆ ಸಕರಾತ್ಮಕ ಸ್ಪಂದನೆ ದೊರೆಯದಿದ್ದಲ್ಲಿ ಕಾನೂನಿನ ಕಠಿಣಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಅಕ್ರಮ ಅಂಗಡಿಗಳ ತೆರವಿಗೆ ನಿರ್ಣಯ ಈಗಾಗಲೇ ಆಲಂಕಾರು ಬಸ್ ತಂಗುದಾಣದ ಸುತ್ತ ಅಕ್ರಮ ಹೂವಿನ ಅಂಗಡಿಗಳು ಸೇರಿದಂತೆ ಇತರ ಅಂಗಡಿಗಳು ತಲೆ ಎತ್ತಿಕೊಂಡಿದೆ ಇವುಗಳಿಗೆ ಪರವಾನಿಗೆ ನೀಡಲಾಗಿದೆಯೇ ಎಂದು ಸದಸ್ಯ ಕೇಶವ ಗೌಡ ಆಲಡ್ಕ ಪಿಡಿಒರವರಲ್ಲಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ಯಾವುದೇ ಪರವಾನಿಗೆ ಬೇಡಿಕೆ ಅರ್ಜಿಗಳಿಗೆ ಸೂಕ್ತ ದಾಖಲೆ ಪತ್ರಗಳಿಲ್ಲ. ಬಸ್ ತಂಗುದಾಣ ಸೇರಿದಂತೆ ರಸ್ತೆ ಬದಿಯ ಜಾಗವು ಲೋಕೋಪಯೋಗಿ ಇಲಾಖೆಗೆ ಸೇರಿದ್ದಾಗಿದೆ. ಈಗಾಗಲೇ ಹಲವು ಪ್ರಕರಣಗಳಲ್ಲಿ ಲೋಕೋಪಯೋಗಿ ಇಲಾಖೆ ಪಿಡಿಒರವರನ್ನು ತರಾಟೆಗೆ ಪಡೆದುಕೊಂಡು ನೋಟೀಸು ಜಾರಿ ಮಾಡಿದೆ. ಇದರಿಂದ ನನ್ನ ಕರ್ತವ್ಯವನ್ನು ಬಹಳಷ್ಟು ಒತ್ತಡದಲ್ಲಿ ಮಾಡುವಂತಾಗಿದೆ. ಈ ಕಾರಣಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ ನಿರೇಕ್ಷೇಪಣಾ ಪತ್ರದ ಜೊತೆಗೆ ಸೂಕ್ತ ದಾಖಲೆಪತ್ರ ನೀಡಿದವರಿಗೆ ಮಾತ್ರ ವ್ಯಾಪಾರ ಪರವಾನಿಗೆಯನ್ನು ನೀಡಲಾಗುವುದು. ಮತ್ತು ಈಗಾಗಲೇ ತಲೆಯೆತ್ತಿಕೊಂಡಿರುವ ಅಕ್ರಮ ಅಂಗಡಿಗಳ ಬಗ್ಗೆ ಆಡಳಿತ ಮಂಡಳಿ ಸೂಕ್ತ ಕ್ರಮ ಗೊಳ್ಳಬೇಕೆಂದು ಪಿಡಿಒ ಅಧ್ಯಕ್ಷರಿಗೆ ತಿಳಿಸಿದರು. ಈ ಬಗ್ಗೆ ಸುಧೀರ್ಘ ಚರ್ಚೆ ನಡೆದು ಬಸ್ ತಂಗುದಾಣದ ಸುತ್ತ ತೆರೆದುಕೊಂಡಿರುವ ಅಕ್ರಮ ಕಟ್ಟಡಗಳನ್ನು ಶೀಘ್ರವೇ ತೆರವುಗೊಳಿಸುವುದೆಂದು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಮತ್ತು ಪೇಟೆಯಲ್ಲಿ ಲೋಕೋಪಯೋಗಿ ಇಲಾಖೆಯ ಜಾಗದ ಉಸ್ತುವಾರಿಯನ್ನು ಸ್ಥಳಿಯಾಡಳಿತದ ಸುಪರ್ದಿಗೆ ನೀಡುವಂತೆ ಇಲಾಖೆಗೆ ಬರೆಯವಯುವುದಾಗಿ ನಿರ್ಣಯಿಸಲಾಯಿತು.

Also Read  ಮನೆ ಮುಂದೆ ನಿಲ್ಲಿಸಿದ್ದ ಬೈಕ್​ ಕಳವು..!

ಪೇಟೆಯಲ್ಲಿ ಕಾರ್ಯಚರಿಸುವ ಎಲ್ಲಾ ಹೂವಿನ ಅಂಗಡಿಗಳು ಸೇರಿದಂತೆ ತಳ್ಳುಗಾಡಿ ಅಂಗಡಿಗಳಿಗೆ ಮಾಸಿಕ 500ರೂಪಾಯಿ ಬಾಡಿಗೆ ನಿಗದಿಪಡಿಸಲಾಯಿತು. ಈ ಮೊತ್ತವನ್ನು ಮುಂಗಡವಾಗಿ ಆರು ತಿಂಗಳಿಗೊಮ್ಮೆ ಪಾವತಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಮತ್ತು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಅಂಗಡಿ ತಳ್ಳುಗಾಡಿಗಳಿದ್ದರೆ ತಕ್ಷಣ ತೆರವುಗೊಳಿಸುವುದೆಂದು ನಿರ್ಣಯಿಸಲಾಯಿತು.

ಆಲಂಕಾರಿನಲ್ಲಿ ಬಾರ್, ಮೀನು ಹಾಗೂ ಹೂ ಮರಾಟದ ವಿಚಾರವಾಗಿ ಸಾರ್ವಜನಿಕವಾಗಿ ಉದ್ಬವಿಸಿದ ಸಮಸ್ಯೆಗಳ ಬಗ್ಗೆ ಪತ್ರಿಕೆಗಳು ಮುತುವರ್ಜಿವಹಿಸಿ ವರದಿ ಪ್ರಕಟಿಸಿ ಜನಪ್ರತಿನಿಧಿಗಳಲ್ಲಿ ಜಾಗೃತಿಯನ್ನು ಮೂಡಿಸುತ್ತಿದೆ. ಸಮಸ್ಯೆಗಳನ್ನು ಬಗೆ ಹರಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಬೇಕು. ಸಮಸ್ಯೆಗಳನ್ನು ಜನಪ್ರತಿನಿಧಿಗಳೇ ಮುಂದಾಗಿ ಪರಿಸಹರಿಸಬೇಕು. ಪತ್ರಿಕೆಗಳು ನಮ್ಮ ಗಮನಕ್ಕೆ ತರುವಂತಾವಾಗಬಾರದು ಈ ಬಗ್ಗೆ ಜನಪ್ರತಿನಿಧಿಗಳು ಮುತುವರ್ಜಿವಹಿಸಬೇಕೆಂದು ಎಂದು ಕೇಶವ ಗೌಡ ಸಭೆಗೆ ಸೂಚಿಸಿದರು. ಇದಕ್ಕೆ ಉಪಾಧ್ಯಕ್ಷ ಸುಧಾಕರ ಪೂಜಾರಿ ಉತ್ತರಿಸಿ ಪತ್ರಿಕೆಗಳಿಗೆ ಬೇರೆ ಕೆಲಸಗಳಿಲ್ಲ ಸಮಸ್ಯೆಗಳ ವರದಿಗಳನ್ನು ಪ್ರಕಟಿಸಿ ಸಮಸ್ಯೆ ಉದ್ಬವಿಸುವುದೇ ಕೆಲಸವಾಗಿದೆ ಎಂದು ಹೇಳಿ ವರದಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಯೇ ಉಡಾಫೆ ಉತ್ತರ ನೀಡಿದರು.

Also Read  ಸಿ.ಪಿ.ಐ.ಎಂ ರಾಷ್ಟ್ರೀಯ ಜನಾಂದೋಲನ ಜಾಥಾಕ್ಕೆ ಕಡಬದಲ್ಲಿ ಚಾಲನೆ

ಗ್ರಾಮೀಣ ಪ್ರದೇಶದ ಬಡಜನತೆಗೆ ನೀಡುವ ಪಡಿತರವನ್ನು ಬಹಳಷ್ಟು ರೀತಿಯಲ್ಲಿ ಸತಾಯಿಸಿ ವಿತರಿಸಲಾಗುತ್ತಿದೆ. ಇದೀಗ ಬೆರಳಚ್ಚಿನ ನೆಪದಲ್ಲಿ ಪಡಿತರ ವಿತರಣೆಯಲ್ಲಿ ಆಹಾರ ಇಲಾಖೆ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ಸದಸ್ಯ ಇಂದುಶೇಖರ ಶೆಟ್ಟಿ ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಬಗ್ಗೆ ತಾ.ಪಂ ಮತ್ತು ಆಹಾರ ಹಾಗೂ ಪಡಿತರ ವಿತರಣಾ ಇಲಾಖೆಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಬರೆಯುವುದಾಗಿ ನಿರ್ಣಯಿಸಲಾಯಿತು. ಇದೇ ವೇಳೆ ಆರೋಗ್ಯ ಸಹಾಯಕಿ ಸರೋಜಿನಿ ಆರೋಗ್ಯ ಇಲಾಖೆ ಸ್ವಚ್ಚತೆಗಾಗಿ ಜಾರಿಗೆ ತಂದಿರುವ ಸಾರ್ವಜನಿಕರಿಗೊಂದು ಸವಾಲು ಯೋಜನೆಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ತಾ.ಪಂ ಸದಸ್ಯೆ ತಾರಾ, ಪಂಚಾಯತ್ ಸದಸ್ಯರಾದ ಕೊರಗಪ್ಪ, ಸದಾನಂದ ಆಚಾರಿ, ಭವಾನಿ, ರೇವತಿ, ನಾಗವೇಣಿ, ಪುಷ್ಪಾ, ಸುನಂದ ಶರವೂರು, ಉಪಸ್ಥಿತರಿದ್ದು. ಪಿಡಿಒ ಜಗನ್ನಾಥ ಶೆಟ್ಟಿ ಸ್ವಾಗತಿಸಿ ವಂದಿಸಿದರು.  ಗುಮಾಸ್ತ ಗೋಪಾಲಕೃಷ್ಣ ಸಹಕರಿಸಿದರು.

error: Content is protected !!
Scroll to Top