(ನ್ಯೂಸ್ ಕಡಬ) newskadaba.com ಕಡಬ, ನ.1. ಶ್ರೀವಿವೇಕಾನಂದ ಯುವಕ ಮಂಡಲ(ರಿ.) ಮರ್ದಾಳ ಇದರ ವತಿಯಿಂದ 21ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ಪುರುಷರ 55ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟ ಹಾಗೂ ಹಗ್ಗಜಗ್ಗಾಟ ಮತ್ತು ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಬುಧವಾರ ಮರ್ದಾಳ ಶ್ರೀಅಯ್ಯಪ್ಪ ಭಜನಾ ಮಂದಿರ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಗೇರು ನಿಗಮದ ನಿವೃತ್ತ ಮ್ಯಾನೇಜರ್ ಗಂಗಾಧರ ಗೌಡ ಪಂಜೋಡಿ ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು. ಪ್ರಗತಿಪರ ಕೃಷಿಕರಾದ ಪ್ರೇಮಸಾಗರ ಆಳ್ವ ಅತ್ಲಾಜೆ ಧ್ವಜಾರೋಹಣಗೈದು ಮಾತನಾಡಿ ದೇಶದ ಯುವಶಕ್ತಿಯನ್ನು ಜಾಗೃತಿಗೊಳಿಸುವ ಪ್ರೇರಣಾಶಕ್ತಿಯಾಗಿದ್ದ ಭಾರತ ಮಾತೆಯ ಸುಪುತ್ರ ವಿವೇಕಾನಂದರ ಹೆಸರನ್ನು ಇಟ್ಟುಕೊಂಡು ಕಳೆದ 20 ವರ್ಷಗಳಿಂದ ಕ್ರೀಡಾಕೂಟ ನಡೆಸುತ್ತಿರುವ ವಿವೇಕಾನಂದ ಯುವಕ ಮಂಡಲ ವಿಶೇಷವಾಗಿ ಭಾರತ ಮಾತೆಯ ಸುಪುತ್ರಿ ಕನ್ನಡ ಮಾತೆಯ ಆರಾಧಿಸುವುದರೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಇಲ್ಲಿನ ಯುವಕರ ಉತ್ಸಾಹ ನಿರಂತರವಾಗಿ ಉಳಿಯಲಿ ಎಂದು ಶುಭಹಾರೈಸಿದರು.
ಪಿಎಲ್ಡಿ ಬ್ಯಾಂಕ್ನ ಅಧ್ಯಕ್ಷ ಎ.ಬಿ ಮನೋಹರ ರೈ ತೆಂಗಿನಕಾಯಿ ಒಡೆದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸಭಾ ಅಧ್ಯಕ್ಷತೆಯನ್ನು ಶ್ರೀವಿವೇಕಾನಂದ ಯುವಕ ಮಂಡಲದ ಅಧ್ಯಕ್ಷರಾದ ಪ್ರಮೋದ್ ರೈ ಕುಡಾಲ ವಹಿಸಿದ್ದು ಕಾರ್ಯಕ್ರಮದ ಯಶಸ್ವಿಗೆ ಎಲ್ಲರ ಸಹಕಾರ ಕೋರಿದರು. ಮುಖ್ಯ ಅತಿಥಿಯಾಗಿ ಎ.ಪಿ.ಎಂ.ಸಿ. ನಿರ್ದೇಶಕ ಮೇದಪ್ಪ ಗೌಡ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮರ್ದಾಳ ಗ್ರಾ.ಪಂ.ಸದಸ್ಯ ಹರೀಶ್ ಕೋಡಂದೂರು, ದಾಮೋದರ ಗೌಡ ಡೆಪ್ಪುಣಿ, ಪ್ರಮುಖರಾದ ನಾರಾಯಣ ಶೆಟ್ಟಿ ಅತ್ಯಡ್ಕ, ತೀರ್ಥಪ್ರಸಾದ್ ಮೀನಾಡಿ, ಸುರೇಶ್ ನೈಲ, ಸಂತೋಷ್ ಪಾಲೆತ್ತಡ್ಕ, ನವೀನ್ ಕೋಕಳ, ಸೀತಾರಾಮ ನಡುಕೈಯೋಲೆ, ಶ್ರೀಧರ ಗೌಡ, ದೊಡ್ಡಯ್ಯ ಕೋಳಂತಾಡಿ ಸೇರಿದಂತೆ ಊರಪರವೂರ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು, ಭಾಗವಹಿಸಿದ್ದರು. ಯುವಕ ಮಂಡಲದ ಗೌರವಾಧ್ಯಕ್ಷ ಉಮೇಶ್ ಬ್ರಹ್ಮಶ್ರೀ ಸ್ವಾಗತಿಸಿ, ಕಾರ್ಯದರ್ಶಿ ವಿನಯ ಕೇನ್ಯ ವಂದಿಸಿದರು. ಸಂಚಾಲಕರಾದ ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಕಾರ್ಯದರ್ಶಿ ತೀರ್ಥಪ್ರಸಾದ್ ಮೀನಾಡಿ ಕ್ರೀಡಾಕೂಟ ನಡೆಸಿಕೊಟ್ಟರು. ಬಳಿಕ ವಿವಿಧ ಕ್ರೀಡಾಕೂಟಗಳು ನಡೆಯಿತು.