ಮಧುಮೇಹದ ಕ್ರೂರ ಲೀಲೆಗೆ ಸಿಲುಕಿ ಕಾಲು ಕಳೆದುಕೊಂಡ ಕೋಡಿಂಬಾಳದ ಹುಕ್ರಪ್ಪ ► ಈ ಬಡಕುಟುಂಬಕ್ಕೆ ಬೇಕಾಗಿದೆ ನೆರವಿನ ಹಸ್ತ

(ನ್ಯೂಸ್ ಕಡಬ) newskadaba.com ಕಡಬ, ನ.1. ಕೂಲಿ ಕೆಲಸ ಮಾಡಿ ಬಡಕುಟುಂಬಕ್ಕೆ ಆಧಾರವಾಗಿದ್ದ ಜೀವವೊಂದು ಮಧುಮೇಹಕ್ಕೆ ತುತ್ತಾಗಿ ಕಾಲನ್ನು ಮಣಿಗಂಟಿನಿಂದ ಕತ್ತರಿಸಿ ಕಳೆದ ಒಂದು ವರ್ಷದಿಂದ ಕುಳಿತ್ತಲ್ಲೆ ದಿನ ಕಳೆಯುವ ಪರಿಸ್ಥಿತಿಯಿದ್ದು ಕುಟುಂಬವು ಸಂಕಷ್ಟದಲ್ಲಿದೆ.

ಕಡಬ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಮಜ್ಜಗುಡ್ಡೆ ದಿ. ಮಾಯಿಲಪ್ಪ ಎಂಬವರ ಪುತ್ರ ಹುಕ್ರಪ್ಪ (56ವ) ಮಧುಮೇಹದ ಕ್ರೂರ ಲೀಲೆಗೆ ಸಿಲುಕಿದವರು. ಇವರು ಸುಮಾರು 25ವರ್ಷಗಳಿಂದ ಕಡಬದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೂಲಿಕಾರ್ಮಿಕನಾಗಿದ್ದು ಗಾರೆ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಗಾರೆ ಕೆಲಸ ಮಾಡುವ ಸಂದರ್ಭದಲ್ಲಿ ಕಾಲಿನ ಪಾದಕ್ಕೆ ಸಣ್ಣ ಗಾಯವಾಗಿತ್ತು. ಇದಕ್ಕೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಪಡೆದರು. ಆದರೆ ಮೊದಲಿಗೆ ವಾಸಿಯಾದ ಗಾಯ ಮತ್ತೆ ಕೆಲವು ಸಮಯದ ನಂತರ ಜೋರಾಗಿ ಉಲ್ಬಣಗೊಂಡಿತ್ತು. ಎಷ್ಟೇ ಚಿಕಿತ್ಸೆ ಮಾಡಿದರೂ ಗಾಯವು ಕಡಿಮೆಯಾಗುವ ಲಕ್ಷಣ ಕಾಣಲಿಲ್ಲ. ಇದರಿಂದ ಪುತ್ತೂರಿನ ಪ್ರಗತಿ ಆಸ್ಪತ್ರೆಯಲ್ಲಿ ತೋರಿಸಿದಾಗ ಮಧುಮೇಹವು ಉಲ್ಬಣಗೊಂಡಿರುವುದರಿಂದ ಕಾಲಿನ ಮಣಿಗಂಟಿನಿಂದ ತೆಗೆದು ಚಿಕಿತ್ಸೆ ಮಾಡಬೇಕಾದ ದುಃಸ್ಥಿತಿ ಎದುರಾಯಿತು. ಕೂಲಿ ಕೆಲಸದಿಂದಲೇ ತನ್ನ ಕುಟುಂಬವನ್ನು ಸಾಕುತ್ತಿದ್ದ ಇವರು ಸರಿಯಾದ ವಾಸ್ತವ್ಯದ ಮನೆ ಇಲ್ಲದೆ ಮನೆ ಕಟ್ಟಲು ಕೂಡಿಟ್ಟ ಅಲ್ಪಸ್ವಲ್ಪ ಹಣ ಹಾಗೂ ಸಾಲ ಮಾಡಿ ಹಣ ಹೊಂದಿಸಿ ಕಾಲಿನ ಚಿಕಿತ್ಸೆ ಮಾಡಲಾಯಿತು. ಆದರೂ ಚಿಕಿತ್ಸೆಯಿಂದ ಗುಣಮುಖರಾಗದೆ ಕಳೆದ ಒಂದು ವರ್ಷದಿಂದ ನಡೆದಾಡಲು ಸಾಧ್ಯವಿಲ್ಲದೆ, ಇತ್ತ ಉದ್ಯೋಗವಿಲ್ಲದೆ ವಿಕಲಚೇತನನಾಗಿ ಹುಕ್ರಪ್ಪರ ಬದುಕು ಸಂಕಷ್ಟದಲ್ಲಿದೆ. ಪತ್ನಿ ಸುಮಲತಾ ಹಾಗೂ ಪುತ್ರಿಯರಾದ ಶಶಿಕಲಾ, ಮಮತ, ಹಾಗೂ ಪುತ್ರ ಉಮೇಶನ ಜೊತೆ ವಾಸಿಸುತ್ತಿದ್ದು. ಪತ್ನಿ ಬೀಡಿ ಕಟ್ಟುತ್ತಿದ್ದು ಪತಿ ಹುಕ್ರಪ್ಪರ ದುಃಸ್ಥಿತಿಯಿಂದಾಗಿ ಇದೀಗ ಕುಟುಂಬದ ಹೊಣೆ ಹೊತ್ತಿದ್ದಾರೆ. ಪುತ್ರ ಉಮೇಶ ಕಡಬದ ಅಂಗಡಿಯೊಂದರಲ್ಲಿ ದುಡಿಯುತ್ತಿದ್ದಾನೆ.

Also Read  ಪುತ್ತೂರು: ಈಶ್ವರಮಂಗಲ ಹನುಮಗಿರಿ ಕ್ಷೇತ್ರಕ್ಕೆ ನ್ಯೂಸ್ ಫಸ್ಟ್ ಸಿಇಒ ರವಿಕುಮಾರ್ ಭೇಟಿ

ಸರಕಾರದಿಂದ ದೊರೆಯಲ್ಲಿಲ್ಲ ಯಾವುದೇ ನೆರವಿನ ಹಸ್ತ:

ಕುಟುಂಬದ ಆಧಾರಸ್ತಂಭವಾಗಿದ್ದ ಹುಕ್ರಪ್ಪರು ಚಿಕಿತ್ಸೆಗಾಗಿ ಸಾಲ ಮಾಡಿ ಹಣಹೊಂದಿಸಿ ಇದೀಗ ಸಾಲ ತೀರಿಸಲು ಪರದಾಡಬೇಕಾಗಿದೆ. ಆದರೆ ಇಂತಹ ಬಡ ಕುಟುಂಬಕ್ಕೆ ಸರಕಾರದಿಂದ ದೊರಕುವ ಮಾಸಿಕ 500ರೂ.ಬಿಟ್ಟರೆ ಬೇರೆ ಯಾವುದೇ ವಿಕಲಚೇತನರಿಗೆ ದೊರೆಯುವ ಸೌಲಭ್ಯವಾಗಲಿ, ಸಹಾಯಧನವಾಗಲಿ ಈ ಕುಟುಂಬಕ್ಕೆ ದೊರೆತ್ತಿಲ್ಲ.

ಕನಸಾಗಿ ಉಳಿದ ಮನೆ ನಿರ್ಮಾಣದ ಕನಸು:

ಬೇರೆಯವರ ಮನೆಗಳ ಗಾರೆ ಕೆಲಸ ಮಾಡಿ ಮನೆಯ ಅಂದವನ್ನು ವೃದ್ಧಿಸಿದ್ದ ಹುಕ್ರಪ್ಪರವರ ಮನೆ ಕಟ್ಟುವ ಕನಸಿಗೆ ವಿಧಿಯು ಅಡ್ಡಗಾಲು ಇಟ್ಟಿದ್ದಾನೆ. ಗಾರೆ ಕೆಲಸ ಮಾಡಿ ಹಣ ಹೊಂದಿಸಿ ಮನೆ ನಿರ್ಮಿಸುವ ಕನಸು ಮಾತ್ರ ಕನಸಾಗಿ ಉಳಿದಿದೆ. ಇವರ ಮನೆಯ ಕೆಲಸ ಅರ್ಧದಲ್ಲೇ ಇದೆ. ಗಾರೆ ಕೆಲಸ ಮಾಡಲು ತಂದಿಟ್ಟ ಮರಳು ಮನೆಯ ಒಳಗಡೆ ರಾಶಿ ಹಾಕಲಾಗಿದೆ. ತನ್ನ ಮನೆಗೆ ಗಾರೆ ಕೆಲಸ ಮಾಡುವ ಯೋಗವನ್ನು ವಿಧಿ ಅವರಿಂದ ಕಿತ್ತುಕೊಂಡಿದೆ. ಕೊಟ್ಟಿಗೆಯಲ್ಲಿ ಅಡುಗೆ ಮಾಡಿ ಪೂರ್ತಿ ಕೆಲಸ ಆಗದ ಮನೆಯಲ್ಲಿಯೇ ರಾತ್ರಿ ಕಳೆಯುತ್ತಿದ್ದಾರೆ.

Also Read  ಅರಣ್ಯದಲ್ಲಿ ಆಕಸ್ಮಿಕ ಕಾಡ್ಗಿಚ್ಚು: ➤ಮೂವರು ಇಲಾಖೆ ಸಿಬ್ಬಂದಿಗಳಿಗೆ ಗಂಭೀರ ಗಾಯ

ಬೇಕಾಗಿದೆ ನೆರವಿನ ಹಸ್ತ:
ಗಾರೆ ಕೆಲಸ ಮಾಡಿ ಕುಟುಂಬವನ್ನು ಸಲಹುತ್ತಿದ್ದ ಹುಕ್ರಪ್ಪರ ಪತ್ನಿ ಸುಮಲತಾ ಬೀಡಿ ಕಟ್ಟಿ ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಪುತ್ರ ಉಮೇಶ ಅಂಗಡಿಯಲ್ಲಿ ಕೆಲಸ ಮಾಡಿ ತಾಯಿಗೆ ನೇರವಾಗುತ್ತಿದ್ದಾನೆ. ಮನೆಯ ಜವಾಬ್ದಾರಿ ಒಂದೆಡೆಯಾದರೆ ಪತಿ ಹುಕ್ರಪ್ಪರ ಔಷಧಿ, ಚಿಕಿತ್ಸೆಯ ಖರ್ಚು ಇನ್ನೊಂದೆಡೆ. ಒಟ್ಟಿನಲ್ಲಿ ತನ್ನ ಪಾಡಿಗೆ ದುಡಿದು ಬದುಕುತ್ತಿದ್ದ ಕುಟುಂಬವು ಮನೆಯ ಆಧಾರಸ್ತಂಭಕ್ಕೆ ಬಂದ ದುಃಸ್ಥಿತಿಯಿಂದಾಗಿ ಕಷ್ಟದ ಪರಿಸ್ಥಿತಿಯಲ್ಲಿದೆ. ಸರಕಾರವು ವಿಕಲಚೇತನರಿಗೆ ಸಾಲು ಸಾಲು ಸೌಲಭ್ಯ ಘೋಷಿಸುತ್ತಿದರೂ ಹುಕ್ರಪ್ಪರಿಗೆ ಯಾವುದೇ ನೆರವು ದೊರೆತ್ತಿಲ್ಲ. ಸಂಬಂಧಪಟ್ಟವರು ಇತ್ತ ಕಡೆ ಗಮನಿಸಬೇಕಾಗಿದೆ. ಇಂತಹ ಸಂಕಷ್ಟದಲ್ಲಿ ದಿನ ಕಳೆಯುತ್ತಿರುವ ಹುಕ್ರಪ್ಪರಿಗೆ ನೆರವಿನ ಹಸ್ತ ಬೇಕಾಗಿದೆ.

ನೆರವು ನೀಡಲು ಇಚ್ಛಿಸುವವರು:

ಹುಕ್ರಪ್ಪ ಎಂ. ಕಡಬ ಸಿಂಡಿಕೇಟ್ ಐ.ಎಫ್.ಎಸ್.ಸಿ. ಸಂಖ್ಯೆ 0000165 ಬ್ಯಾಂಕ್ ಖಾತೆ ಸಂಖ್ಯೆ 01652200039889 ನೇರವಾಗಬಹುದು.

error: Content is protected !!
Scroll to Top