(ನ್ಯೂಸ್ ಕಡಬ) newskadaba.com ಪುತ್ತೂರು, ಅ.30. ನಿರಂತರ ಎರಡು ವರ್ಷಗಳಿಂದ ಬೇಡಿಕೆ ಮುಂದಿಡುತ್ತಿದ್ದರೂ ಇದುವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಆಗ್ರಹಿಸಿ ತಾಲೂಕು ಪಂಚಾಯತ್ ಸದಸ್ಯೆ ಕೆ.ಟಿ. ವಲ್ಸಮ್ಮ ಕಪ್ಪು ಪಟ್ಟಿ ಧರಿಸಿ ಶನಿವಾರ ಪ್ರತಿಭಟನೆ ನಡೆಸಿದರು.
ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್ ಅಧ್ಯಕ್ಷತೆಯಲ್ಲಿ ತಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ಕಪ್ಪು ಬಟ್ಟೆ ಹೊದ್ದುಕೊಂಡು ಆಗಮಿಸಿದ ತಾಲೂಕು ಪಂಚಾಯತ್ ಸದಸ್ಯೆ ಕೆ.ಟಿ. ವಲ್ಸಮ್ಮ, ವೇದಿಕೆಯಲ್ಲಿದ್ದವರಿಗೆ ಮನವಿ ನೀಡಿದರು. ಬಳಿಕ ಕಪ್ಪು ಬಟ್ಟೆಯನ್ನು ಬಾಯಿಗೆ ಕಟ್ಟಿ ಸಭೆಯಲ್ಲಿ ಕುಳಿತು ಕೊಂಡರು. ಇವರ ಪರವಾಗಿ ಸದಸ್ಯೆ ಉಷಾ ಅಂಚನ್ ವಿಷಯ ಪ್ರಸ್ತಾಪಿಸಲು ಮುಂದಾದಾಗ ತಾ.ಪಂ. ಇಒ ಜಗದೀಶ್ ತಡೆದು, ಮತ್ತೂಮ್ಮೆ ವಿಚಾರವನ್ನು ಹೇಳುವ ಅಗತ್ಯವಿಲ್ಲ ಈಗಾಗಲೇ ಮನವಿ ನೀಡಿದ್ದಾರೆ. ಆದರೆ ಸಭೆಯಲ್ಲಿ ಮನವಿ ನೀಡಿದ ಕಾರಣ, ಪರಿಶೀಲಿಸಲು ಸ್ವಲ್ಪ ಸಮಯ ಬೇಕು. ಬಳಿಕ ಉತ್ತರಿಸಲಾಗುವುದು ಎಂದರು.
ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್ ಮಾತನಾಡಿ, ಸೀಮಿತ ಅನುದಾನವಿದ್ದರೂ ಇರುವುದನ್ನು ಸಮಾನವಾಗಿ ಹಂಚಲಾಗಿದೆ. ಇದು ಸದಸ್ಯರಿಗೂ ಗೊತ್ತಿದೆ. ನಿಮ್ಮ ಬೇಡಿಕೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ. ಕೆಡಿಪಿ ಸಭೆಯಲ್ಲಿ ಪ್ರತಿಭಟನೆ ಮಾಡುವುದು ಸರಿಯಲ್ಲ. ಪ್ರತಿಭಟನೆ ಹಿಂದೆಗೆದುಕೊಳ್ಳಿ ಎಂದು ಮನವಿ ಮಾಡಿಕೊಂಡರು.
ಜಿಲ್ಲಾ ಪಂಚಾಯತ್ ಸದಸ್ಯ ಸರ್ವೋತ್ತಮ ಗೌಡ ಮಾತನಾಡಿ, ಸದಸ್ಯೆ ನೀಡಿದ ಮನವಿಯಲ್ಲಿ ಹೆಚ್ಚಿನ ಬೇಡಿಕೆಗಳು ಕಂದಾಯ ಇಲಾಖೆಗೆ ಸಂಬಂಧಪಟ್ಟಿದ್ದರಿಂದ ಇದಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಉತ್ತರ ನೀಡಬೇಕು ಎಂದರು.
ಪುತ್ತೂರು ತಾಲೂಕಿನ ಪ್ರಾಥಮಿಕ ಶಾಲೆಗಳು ಆರಂಭವಾಗಿ ಆರು ತಿಂಗಳು ಕಳೆದರೂ 3 ಸಾವಿರ ವಿದ್ಯಾರ್ಥಿಗಳಿಗೆ ಇನ್ನೂ ಪಠ್ಯಪುಸ್ತಕ ಕೊರತೆ ಇದೆ ಎಂಬ ಮಾಹಿತಿಯನ್ನು ಸಭೆಗೆ ನೀಡಲಾಯಿತು. ಇದು ಸದಸ್ಯೆ ಆಕ್ರೋಶಕ್ಕೂ ಕಾರಣವಾಯಿತು.
ಈ ಬಗ್ಗೆ ಮಾತನಾಡಿದ ಸದಸ್ಯೆ ತೇಜಸ್ವೀನಿ, ರಾಜ್ಯ ಸರಕಾರದ ನಿರ್ಲಕ್ಷ್ಯದಿಂದ ಹೀಗಾಗಿದೆ. ಕೆಲವೇ ದಿನದಲ್ಲಿ ಪರೀಕ್ಷೆಗಳು ಬರಲಿವೆ. ಇದಕ್ಕೆ 3 ಸಾವಿರ ವಿದ್ಯಾರ್ಥಿಗಳು ಏನು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಉಷಾ ಅಂಚನ್ ವಿವರಣೆ ಕೇಳಿದರು.
ಉತ್ತರಿಸಿದ ಶಿಕ್ಷಣ ಸಂಯೋಜನಾಧಿಕಾರಿ, ಮುಖ್ಯಶಿಕ್ಷಕರು ಬೇಡಿಕೆ ಸಲ್ಲಿಸಿದ ಪಠ್ಯಪುಸ್ತಕಗಳನ್ನು ಪೂರೈಕೆ ಮಾಡಲಾಗಿದೆ. ಆದರೆ ಹೆಚ್ಚುವರಿ ಬೇಡಿಕೆಯ ಪಠ್ಯಪುಸ್ತಕ ಸರಬರಾಜಾಗಿಲ್ಲ. ಈ ಬಗ್ಗೆ ಮೇಲಧಿಕಾರಿಗಳಲ್ಲಿ ಪ್ರಶ್ನಿಸಿದಾಗ, ಮುದ್ರಣ ಆಗಿಲ್ಲ ಎಂಬ ಉತ್ತರ ನೀಡಿದ್ದಾರೆ ಎಂದರು.
ಮನವಿಯಲ್ಲಿ ಏನೆದೆ..??
ಎರಡು ವರ್ಷಗಳಿಂದ ತಾ.ಪಂ ಸದಸ್ಯೆಯಾಗಿ ಹಲವು ಬೇಡಿಕೆಗಳನ್ನು ಮುಂದಿಟ್ಟರೂ ಸೂಕ್ತ ಸ್ಪಂದನೆ ಸಿಗಲಿಲ್ಲಿ. ಇದರಲ್ಲಿ ಇಚ್ಲಂಪಾಡಿ ಗ್ರಾಮಕ್ಕೆ ಆಟದ ಮೈದಾನ, ಗ್ರಾಮಕರಣಿಕರ ವಸತಿ ಗೃಹ, ಪಶು ವೈದ್ಯಕೀಯ ಚಿಕಿತ್ಸಾಲಯದ ಕೊಠಡಿ, ಎಸ್.ಜಿ.ಎಸ್.ವೈ. ಯೋಜನೆಯ ತರಭೇತಿ ಕೇಂದ್ರ, ಅಕ್ರಮ ಸಕ್ರಮದ ಪ್ಲಾಂಟಿಂಗ್, ಅಕ್ರಮ ಸಕ್ರಮದ ಕಡತ ಸೆಟ್ಟಿಂಗ್ ಆಗಿ ಹಣ ಪಾವತಿಸಿ 13 ವರ್ಷ ಕಳೆದರೂ ಹಕ್ಕು ಪತ್ರ ನೀಡದೇ ಇರುವ ವಿಚಾರ, ಕುರಿತಾದ ವಿಚಾರಗಳು ಮನವಿಯಲ್ಲದೆ ಎಂದಿದ್ದಾರೆ.