ಹೊಸಮಠ: ಸಾಲ ಮನ್ನಾ ಸೌಲಭ್ಯದಿಂದ ವಂಚಿತರಾಗಿರುವ 80 ಮಂದಿ ಸಾಲಗಾರು..!!!

(ನ್ಯೂಸ್ ಕಡಬ) newskadaba.com ಕಡಬ, ಅ.30. ಸರಕಾರದ ಸಾಲಮನ್ನಾ ಯೋಜನೆಯಿಂದ ಕುಟ್ರುಪ್ಪಾಡಿ ಸಿಎ ಬ್ಯಾಂಕ್ಗೆ 3.5ಕೋಟಿ ರೂ.ಬರಲು ಬಾಕಿ, 80 ಜನ ಸದಸ್ಯರು ಸಾಲಮನ್ನಾದಿಂದ ವಂಚಿತರಾಗಿದ್ದಾರೆ. ಸಾಲಮನ್ನಾ ಘೋಷಿಸಿದ ಹಣವನ್ನು ಕೂಡಲೇ ಸಂಘಕ್ಕೆ ಜಮೆ ಮಾಡುವುದರೊಂದಿಗೆ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿ ಸಾಲ ಮನ್ನಾ ಸೌಲಭ್ಯದಿಂದ ವಂಚಿತರಾಗಿರುವ 80 ಮಂದಿ ಸಾಲಗಾರರಿಗೂ ಸೌಲಭ್ಯ ಒದಗಿಸಬೇಕಾಗಿದೆ ಎಂದು ಹೊಸಮಠ ಪ್ರಾ.ಕೃ.ಸ.ಸಂಘದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ನಿರ್ದೇಶಕ ಜಯಚಂದ್ರ ರೈ ಕುಂಟೋಡಿಯವರು ಸರಕಾರ ರೈತರ ಸಾಲವೆನೋ ರೂ.50,000 ಮನ್ನಾ ಮಾಡಿ ಆದೇಶ ಹೊರಡಿಸಿದ್ದು ಈ ಬಗ್ಗೆ ನಮ್ಮ ಹೊಸಮಠ ಸಂಘದ ಸದಸ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತ್ರ ಕಳುಹಿಸಿದ್ದು ರೈತರು ಸಂಘದಲ್ಲಿ ಬಂದು ಮನ್ನಾ ಮಾಡಿದ ಹಣವನ್ನು ಕೇಳುತ್ತಿದ್ದಾರೆ ಆದರೆ ಸರಕಾರ ಘೋಷಣೆ ಮಾಡಿದ ಹಣವನ್ನು ಸಂಘದ ಖಾತೆಗೆ ಜಮೆ ಮಾಡದೆ ಇಲ್ಲಿಯ ಸದಸ್ಯರಿಗೆ ಸುಮಾರು 3.5 ಕೋಟಿ ಸಾಲಮನ್ನಾ ಯೋಜನೆಯ ಹಣ ಪಾವತಿಯಾಗಬೇಕಾಗಿದೆ ಎಂದ ಅವರು ಕಳೆದ ಜೂ.20ರವರೆಗಿನ ಸಾಲಗಾರರಿಗೆ ರೂ.50000 ಸಾಲಮನ್ನಾ ಘೋಷಣೆ ಮಾಡಿದ್ದು ಜೂ.20ರ ಒಂದು ದಿನದ ಮೊದಲು ಪಾವತಿ ಮಾಡಿದವರು ಈ ಸೌಲಭ್ಯದಿಂದ ವಂಚಿತರಾಗಿದ್ದು ಅವರಿಗೂ ಸಾಲಮನ್ನಾ ಸೌಲಭ್ಯ ಒದಗಿಸಬೇಕೆಂದು ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ಬಗ್ಗೆ ಮಾತನಾಡಿದ ನಿರ್ದೇಶಕ ಶಶಾಂಕ್ ಗೋಖಲೆ ಒಟ್ಟಿನಲ್ಲಿ ಸರಕಾರದ ಸಾಲ ಸೌಲಭ್ಯ ಪ್ರತಿಯೊಬ್ಬ ಸಾಲಗಾರನಿಗೂ ಸಿಗಬೇಕಾಗಿದ್ದು ನಿಗದಿತ ಸಮಯಕ್ಕೆ ಸಾಲವನ್ನು ಯಾವುದೇ ಮೂಲದಿಂದ ಸಂಗ್ರಹಿಸಿ ಮರುಪಾವತಿಸಿ ಮತ್ತೇ ಸಾಲಕ್ಕಾಗಿ ಅರ್ಜಿ ಹಾಕಿದ ರೈತರಿಗೆ ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅವರನ್ನು ಕೂಡ ಸಾಲ ಮನ್ನಾ ಯೋಜನೆಯಲ್ಲಿ ಪರಿಗಣಿಸಬೇಕೆಂದು ಸರಕಾರವನ್ನು ಒತ್ತಾಯಿಸಿದರು. ವಿಷಯಕ್ಕೆ ಪೂರಕವಾಗಿ ಕೃಷ್ಣಪ್ಪ ದೇವಾಡಿಗ, ಪದ್ಮಯ ಪೂಜಾರಿ, ಮೋಹನ ಗೌಡ, ಸೀತಮ್ಮ ಧ್ವನಿಗೂಡಿಸಿದರು. ವಿಚಾರದ ಬಗ್ಗೆ ಉಪಾಧ್ಯಕ್ಷ ಶಿವಪ್ರಸಾದ್ ಪುತ್ತಿಲ ಮಾತನಾಡಿ ಸರಕಾರದ ಯೋಜನೆಗಳು ಪ್ರತಿಯೊಬ್ಬ ರೈತಾಪಿ ವರ್ಗದವರಿಗೆ ಸಿಗಬೇಕಾಗಿದ್ದು ಇಲ್ಲಿ ಒಂದು ಕಡೆಯಿಂದ ಸಾಲವನ್ನು ನಿಗದಿತ ಅವಧಿಯೊಳಗೆ ಪಾವತಿಸಿದವರು ಸಾಲ ಸೌಲಭ್ಯದಿಂದ ವಂಚಿತರಾಗಿದ್ದರೆ ಇನ್ನೊಂದು ಕಡೆಯಿಂದ ಸಾಲಗಾರನಿಗೆ ಮುಂದಿನ ಸಾಲ ಪಡೆಯುವಲ್ಲಿ ರೂ.50000 ಕಡಿತಗೊಳಿಸಿಯೇ ಸಾಲ ಸಿಗುತ್ತಿದ್ದು ಇದರಿಂದಲೂ ಸಾಲಗಾರನಿಗೆ ತನ್ನ ಕೃಷಿ ಚಟುವಟಿಕೆಗಳನ್ನು ಮುಂದುವರೆಸಲು ಅನನುಕೂಲವಾಗುತ್ತಿದೆ. ಇದರಿಂದ ಜೂ.20ರ ಮೊದಲು ಮರುಪಾವತಿಸಿ ಮತ್ತೇ ಸಾಲಕ್ಕಾಗಿ ಅರ್ಜಿ ಹಾಕಿ ಕಾಯುತ್ತಿದ್ದು ಅವರಿಗೂ ಈ ಸಾಲಮನ್ನಾ ಸೌಲಭ್ಯ ಸಿಗಬೇಕಾಗಿರುವುದಲ್ಲದೆ ರೈತರು ಮುಂದಕ್ಕೆ ಪಡೆಯುವ ಸಾಲದಲ್ಲಿ ರೂ.50000 ಕಡಿತಗೊಳಿಸದೇ ರೈತರು ನೀಡಿದ ಎನ್ಸಿಎಸ್ ಪ್ರಕಾರ ಸಾಲ ನೀಡಲು ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಸಭೆಯಲ್ಲಿ ನಿರ್ದೇಶಕರ ಚರ್ಚೆಗೆ ಉತ್ತರಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಕರುಣಾಕರ ಗೋಗಟೆಯವರು ಸರಕಾರ ಯೋಜನೆಗಳನ್ನೇನೋ ಜಾರಿಗೊಳಿಸಿದೆ. ಆದರೆ ಫಲಾನುಭವಿಗಳಿಗೆ ಅದರ ಪ್ರಯೋಜನ ದೊರೆಯಲು ತುಂಬಾ ವಿಳಂಭವಾಗುತ್ತಿದ್ದು ಈಗಾಗಲೆ ಸಿದ್ದರಾಮಯ್ಯ ಸರಕಾರ ಪ್ರತಿಯೊಬ್ಬ ರೈತರ ರೂ.50000 ಸಾಲಮನ್ನಾ ಘೋಷಿಸಿದ್ದು ರೈತರಿಗೆ ಘೋಷಣಾ ಪತ್ರ ಕಳುಹಿಸಿದ್ದರೂ ಸಂಬಂಧಪಟ್ಟ ಕೃಷಿಪತ್ತಿನ ಸಹಕಾರಿ ಸಂಘಗಳಿಗೆ ಸಾಲಮನ್ನಾ ಯೋಜನೆಯ ಹಣ ಪಾವತಿ ಮಾಡದೆ ತೊಂದರೆಯಾಗಿದ್ದು ನಮ್ಮ ಈ ಹೊಸಮಠ ಪ್ರಾ.ಕೃ.ಸ.ಸಂಘಕ್ಕೆ 3.5 ಕೋಟಿ ರೂ.ಜಮೆಯಾಗಬೇಕಾಗಿದೆ. ಇದರೊಂದಿಗೆ ಸರಕಾರದ ಸೌಲಭ್ಯ ಪಡೆಯಲು ಜೂ.20ರ ವರೆಗೆ ಸಾಲ ಬಾಕಿ ಇದ್ದವರಿಗೆ ಸಾಲಮನ್ನಾ ಯೋಜನೆ ಘೋಷಿಸಿದ್ದು ನಿಯಮಬದ್ದವಾಗಿ ಸಮಯಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿಸುತ್ತಾ ಬಂದಿರುವ ರೈತಾಪಿ ವರ್ಗದವರು ಜೂ.20ರ ಮೊದಲು ಸಾಲ ಮರುಪಾವತಿಸಿ ಪುನಃ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಸುಮಾರು 80ಕ್ಕೂ ಮೇಲ್ಪಟ್ಟು ರೈತರು ಸಾಲಮನ್ನಾ ಯೋಜನೆಯಿಂದ ವಂಚಿತರಾಗಿದ್ದು ಅವರಿಗೂ ಈ ಸೌಲಭ್ಯ ಸಿಗಬೇಕಾಗಿದೆ. ಈ ನಿಟ್ಟಿನಲ್ಲಿ ಕಳೆದ ಮಹಾಸಭೆಯಲ್ಲಿ ಕೂಡ ಸಂಘದ ಸರ್ವಸದಸ್ಯರ ಆಗ್ರಹದಂತೆ ನಿರ್ಣಯಿಸಿ ಸರಕಾರಕ್ಕೆ ಕಳುಹಿಸಲಾಗಿದೆ. ಇಂದು ಮತ್ತೇ ಸಾಮಾನ್ಯ ಸಭೆಯಲ್ಲಿ ನಿರ್ದೇಶಕರ ಒತ್ತಾಯದಂತೆ ನಿರ್ಣಯಿಸಿ ಸರಕಾರಕ್ಕೆ ಕಳುಹಿಸಿಕೊಡಲಾಗುವುದು. ಎಂದ ಅವರು ಒಟ್ಟಿನಲ್ಲಿ ಸಂಘದಲ್ಲಿ ಸದಸ್ಯರಾಗಿರುವ ಎಲ್ಲಾ ರೈತಾಪಿ ವರ್ಗದವರಿಗೂ ಸಂಘದಿಂದ ದೊರೆಯುವ ಸೌಲಭ್ಯಗಳು ದೊರೆಯುವಂತಾಗಬೇಕು ಎಂದರು.

Also Read  ಸವಣೂರು: ಶ್ರೀ ಕ್ಷೇ.ಧ.ಗ್ರಾ.ಯೋ.ಯ ಮೇಲ್ವಿಚಾರಕಿಗೆ ಬೀಳ್ಕೊಡುಗೆ

ನಿರ್ದೇಶಕ ಮೋಹನ ಪಿ.ಬಿ ಮಾತನಾಡಿ ರೈತರು ಸಾಲಕ್ಕಾಗಿ ಸಲ್ಲಿಸುವ ಅರ್ಜಿಯನ್ನು ಕೂಡಲೇ ಪರಿಶೀಲನೆ ನಡೆಸಿ ಸಮಿತಿಯಲ್ಲಿ ಮಂಜೂರುಗೊಳಿಸಿ ಕೂಡಲೆ ಸಾಲ ಸಿಗುವಂತಾಗಬೇಕು ಎಂದು ಸಲಹೆ ನೀಡಿದರು. ಈ ಬಗ್ಗೆ ಉತ್ತರಿಸಿದ ಅಧ್ಯಕ್ಷ ಕರುಣಾಕರ ಗೋಗಟೆ ಸಂಘದ ಎಲ್ಲಾ ಸದಸ್ಯರಿಗೆ ಸಾಮಾನ್ಯ ಸಭೆಗೆ 2 ದಿನ ಮುಂಚಿತವಾಗಿಯೇ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದ್ದರೂ ಕೆಲವರು ಇನ್ನೂ ದಾಖಲೆ ಸಲ್ಲಿಸುವಲ್ಲಿ ವಿಳಂಭಿಸುತ್ತಿದ್ದಾರೆ, ಈ ಬಗ್ಗೆ ನಿರ್ದೇಶಕರು ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಹೇಳಿದ ಅವರು ಸಿಬ್ಬಂದಿಗಳು ಕೂಡ ಸದಸ್ಯರಿಗೆ ಪೂರಕವಾದ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ನೀಡುವಂತೆ ತಿಳಿಸಲು ಸೂಚಿಸಲಾಗುವುದು ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಸುಂದರ ಶೆಟ್ಟಿ ಸ್ವಾಗತಿಸಿ, ವರದಿ ವಾಚಿಸಿ ಕೊನೆಗೆ ವಂದಿಸಿದರು.

error: Content is protected !!
Scroll to Top