(ನ್ಯೂಸ್ ಕಡಬ) newskadaba,ಮಂಗಳೂರು ಜೂ.30:ಕೊರೊನಾ ಲಸಿಕೆ ಕೊಡಿಸುವುದಾಗಿ ಹೇಳಿ ರಾತ್ರೋರಾತ್ರಿ ಮಹಿಳೆಯರನ್ನು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಖಾಲಿ ಇರುವ ಬೆಡ್‌ಗಳ ಭರ್ತಿಗಾಗಿ ನಕಲಿ ರೋಗಿಗಳನ್ನು ಕರೆತರುವ ಮೆಡಿಕಲ್ ಕಾಲೇಜ್‌ಗಳ ಕಳ್ಳಾಟದ ಸತ್ಯ ಪೊಲೀಸರ ತನಿಖೆ ವೇಳೆ ಬಯಲಾಗಿದೆ.
ಇನ್ನೂ ಈ ಘಟನೆ ಮೂಡಬಿದ್ರೆ ತಾಲೂಕಿನ ಕುರ್ನಾಡು ಗ್ರಾಮದಲ್ಲಿ ನಡೆದಿದ್ದು, ಮಂಗಳೂರು ಹೊರವಲಯದ ಕಣಚೂರು ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಕೊಡಿಸುವುದಾಗಿ ಹೇಳಿ ಸುಮಾರು 85 ಮಹಿಳೆಯರನ್ನು ತಡರಾತ್ರಿ ಕಾಲೇಜು ಬಸ್‌ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಪೊಲೀಸರ ತನಿಖೆ ವೇಳೆ ಇದರ ಹಿಂದಿನ ಅಸಲಿ ಕಾರಣ ತಿಳಿದುಬಂದಿದ್ದು, ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯ ಮ್ಯಾನೇಜರ್ ನವಾಜ್ ಇದರಲ್ಲಿ ಭಾಗಿಯಾಗಿರುವ ವಿಷಯ ಬೆಳಕಿಗೆ ಬಂದಿದೆ. ಕಾಲೇಜಿನ ಬಸ್‌ನಲ್ಲಿ ಎಲ್ಲಾ ಮಹಿಳೆಯರನ್ನು ತಮ್ಮ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದು, ಇದನ್ನು ಗಮನಿಸಿದ ಗ್ರಾಮಸ್ಥರು ಅನುಮಾನಗೊಂಡು ಪ್ರಶ್ನೆ ಮಾಡಿದಾಗ ತಬ್ಬಿಬ್ಬಾದ ಮ್ಯಾನೇಜರ್ ನವಾಜ್ ಉತ್ತರ ಕೊಡಲು ತಡಬಡಾಯಿಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಮಹಿಳೆಯರ ಸಾಗಾಟದ ಹಿಂದಿನ ಅಸಲಿಯತ್ತು ಬಯಲಾಗಿದ್ದು, ರೋಗಿಗಳಂತೆ ನಟಿಸಲು ಹೇಳಿ ಮಹಿಳೆಯರ ಸಾಗಾಟ ಮಾಡಲಾಗುತ್ತಿದ್ದು, ಫ್ರೀ ಬೆಡ್‌ಗಳಿಗೆ ಹಣ ಕೊಟ್ಟು ನಕಲಿ ರೋಗಿಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ತನಿಖೆಯ ವೇಳೆ ಸತ್ಯ ಹೊರಬಿದ್ದಿದೆ.ಈ ಬಗ್ಗೆ ವಿಸ್ತೃತ ತನಿಖೆಯಾದಲ್ಲಿ ಇನ್ನೂ ಹಲವು ಮೆಡಿಕಲ್ ಕಾಲೇಜುಗಳ ಅಕ್ರಮ ಬಯಲಾಗುವ ಸಾಧ್ಯತೆ ಇದೆ.