(ನ್ಯೂಸ್ ಕಡಬ) newskadaba,ಮಂಗಳೂರು ಜೂ.30: ಕೇರಳ ಗಡಿಭಾಗದಲ್ಲಿ ಡೆಲ್ಟಾ ಹಾಗೂ ಕೊರೋನಾ ಆತಂಕದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಕರ್ನಾಟಕ-ಕೇರಳ ಗಡಿಭಾಗದ ತಲಪಾಡಿಗೆ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಭೇಟಿ ನೀಡಿ ಗಡಿ ತಪಾಸಣೆ ತೀವ್ರಗೊಳಿಸಲು ಸೂಚನೆ ನೀಡಿದ್ದಾರೆ.
ಗಡಿಯಲ್ಲಿ ಆರ್ ಟಿಪಿಸಿಆರ್ ಟೆಸ್ಟ್ ಸೇರಿ ಕಟ್ಟುನಿಟ್ಟಿನ ತಪಾಸಣೆಗೆ ಆದೇಶ ನೀಡಿದ್ದು, ಕೇರಳ-ಕರ್ನಾಟಕ ನಡುವಿನ ನಾಲ್ಕು ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಮಂಗಳೂರಿನ ತಲಪಾಡಿ ಸೇರಿದಂತೆ ಸಾರಡ್ಕ, ನೆಟ್ಟಣಿಗೆ ಮುಡ್ನೂರು, ಜಾಲ್ಸೂರು ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.ಗಡಿ ದಾಟಿ ಬರುವ ಕೇರಳದವರು ಆರ್ ಟಿಪಿಸಿಆರ್ ನೆಗೆಟಿವ್ ವರದಿಯೊಂದಿಗೆ ಮಂಗಳೂರು ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ನೆಗೆಟಿವ್ ರಿಪೋರ್ಟ್ ತರದವರಿಗೆ ಗಡಿಯಲ್ಲೇ ಆರ್ ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತದೆ. ಮೆಡಿಕಲ್ ಅಗತ್ಯಕ್ಕೆ ಮಂಗಳೂರಿಗೆ ಬರೋರು ಆಸ್ಪತ್ರೆಗಳಲ್ಲಿ ಟೆಸ್ಟ್ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.