(ನ್ಯೂಸ್ ಕಡಬ) newskadaba, ಹಾಸನ ಜೂ.26: ತಂದೆ ಹಾಗೂ ತಾಯಿ ಇಬ್ಬರು ಸೇರಿ ಸ್ವಂತ ಮಗುವನ್ನೇ ಕೊಂದು ಶವವನ್ನು ಕಾಫಿತೋಟದಲ್ಲಿ ಹೂತಿರುವ ಅನುಮಾನದ ಮೇಲೆ ಮಗುವಿನ ಮೃತದೇಹ ಹೊರತೆಗೆದು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಜಿಲ್ಲೆಯ ಆಲೂರು ತಾಲೂಕಿನ, ಕೆ.ಹೊಸಕೋಟೆ ಹೋಬಳಿಯ ಕಾಡ್ಲೂರು ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಕೂಲಿ ಕೆಲಸಕ್ಕೆಂದು ಅಸ್ಸಾಂನಿಂದ ತಾಲೂಕಿನ ಕೆ.ಹೊಸಕೋಟೆ ಹೋಬಳಿಗೆ ಆಗಮಿಸಿದ್ದ ಕೂಲಿಕಾರ್ಮಿಕರ ಕುಟುಂಬಸ್ಥರಿಂದ ಈ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ.ಕೆಲ ದಿನಗಳ ಹಿಂದೆ ಪತಿ, ಪತ್ನಿ ನಡುವೆ ಕೌಟುಂಬಿಕ ಕಾರಣಕ್ಕೆ ಜಗಳ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಮಗುವನ್ನು ಹೊಡೆದು ಸಾಯಿಸಿ ಶವವನ್ನು ಹೂತು ಹಾಕಲಾಗಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.ಉಪವಿಭಾಗಾಧಿಕಾರಿ ಮಾರ್ಗದರ್ಶನ ದಲ್ಲಿ ಸ್ಥಳಕ್ಕೆ ಭೇಟಿ ನೀಡಿರುವ ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳ ತಂಡ ಹೂತಿರುವ ಶವವನ್ನು ಹೊರ ತೆಗೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.